ಚಿಕ್ಕಬಳ್ಳಾಪುರ:ಕಾಂಗ್ರೆಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡದಿದ್ದರೆ, ಅವರ ಹಗರಣಗಳ ಬಗ್ಗೆ ನಾನೂ ಬಾಯಿ ಬಿಡಬೇಕಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ನವರಿಗೆ ಹಗರಣಗಳನ್ನು ಮಾಡಿ ಅಭ್ಯಾಸವಾಗಿದೆ. ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ಹಳದಿ, ಮೊದಲು ಆ ರೋಗದಿಂದ ಹೊರಗೆ ಬರಲಿ. ಇಲ್ಲವಾದರೆ ಯಾರು ಎಲ್ಲೆಲ್ಲಿ ಹೋಗಿದ್ರು, ಯಾರು ಎಲ್ಲಿ ಲೂಟಿ ಮಾಡಿದ್ರು ಅನ್ನೋದು ನನಗೆ ಗೊತ್ತಿದೆ. ಅದನ್ನು ನಾನು ಈಗ ಬಾಯಿ ಬಿಡಬೇಕಾಗುತ್ತದೆ ಎಂದು ಸೀರಿಯಸ್ ಆಗಿ ವಾರ್ನಿಂಗ್ ಮಾಡಿದ್ದಾರೆ.
ಡಾ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವರು ಪಿಪಿಇ ಕಿಟ್ ಹಗರಣ ನಡಿದಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಆರೋಗ್ಯ ಇಲಾಖೆಯವರು ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡಿದ್ದಾರೆ. ಡಾ. ಮಂಜುನಾಥ್ ಅವರು ಇದನ್ನು ಶಿಫಾರಸು ಮಾಡಿದ್ದಾರೆ. ವಾಸ್ತವ, ಸತ್ಯಾಸತ್ಯತೆ ತಿಳಿದು ಆರೋಪ ಮಾಡಬೇಕು ಹೊರತು, ಸುಮ್ಮನೆ ಮಾತನಾಡುವುದು ಸಮಂಜಸವಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಸಚಿವ ಸುಧಾಕರ್ ಗುಡುಗಿದ್ದಾರೆ.
ಇನ್ನು, ಬೆಂಗಳೂರಿನಲ್ಲಿ ಮಾತ್ರ ಲಾಕ್ ಮಾಡುವ ಬಗ್ಗೆ ಸಾಕಷ್ಟು ತಜ್ಞರು ಸಹ ಸಲಹೆಗಳನ್ನು ನೀಡುತ್ತಿದ್ದಾರೆ. ಇದನ್ನೆಲ್ಲ ಪರಿಗಣನೆಗೆ ತಗೆದುಕೊಂಡು ನಂತರ ಲಾಕ್ಡೌನ್ ಬಗ್ಗೆ ನಿರ್ಧಾರ ಮಾಡಲಾಗುವುದು. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದರೆ ಶೇ.95 ಸೊಂಕನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಬೆಂಗಳೂರಿನ ಜನತೆಯಿಂದ ಸಂಪೂರ್ಣ ಸಹಕಾರ ದೊರೆಯುತ್ತಿಲ್ಲ ಎಂಬುದು ಸತ್ಯ. ಅವರನ್ನು ಸರಿದಾರಿಗೆ ತರುವುದು ಸರ್ಕಾರಕ್ಕೆ ಗೊತ್ತಿದೆ. ಮಾಧ್ಯಮಗಳು ಸಹ ಪಾಸಿಟಿವ್ ಸುದ್ದಿಗಳನ್ನು ಪ್ರಸಾರ ಮಾಡಬೇಕಿದೆ. ಸೋಂಕಿತರ ಸಂಖ್ಯೆಯನ್ನು ನೀವು ಹೇಳುತ್ತೀರಿ. ಆದರೆ, ಗುಣಮುಖರಾದವರ ಬಗ್ಗೆ ಯಾಕೆ ಹೇಳಿಕೆ ನೀಡುವುದಿಲ್ಲ ಎಂದು ಪ್ರಶ್ನಿಸಿದರು.