ಚಿಕ್ಕಬಳ್ಳಾಪುರ: ಕೋಚಿಮುಲ್ ಅಡಳಿತ ಮಂಡಳಿಯ ಐಷಾರಾಮಿ ಜೀವನ ಮತ್ತು ಭ್ರಷ್ಟಚಾರವನ್ನು ಖಂಡಿಸಿ ನಿನ್ನೆ (ಬುಧವಾರ) ಪ್ರಗತಿ ಪರ ಸಂಘಟನೆಗಳು ಒಕ್ಕೂಟ ಮತ್ತು ನೊಂದ ಹಾಲು ಉತ್ಪಾದಕರ ವೇದಿಕೆ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಸೇರಿ ರಸ್ತೆ ತಡೆ ನಡೆಸಿ ಗೌರಿಬಿದನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಗೌರಿಬಿದನೂರಿನಲ್ಲಿ ಹಾಲು ಉತ್ಪಾದಕರಿಂದ ಪ್ರತಿಭಟನೆ ನಗರದ ಶೀಥಲ ಕೇಂದ್ರದ ಅವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಮಾತನಾಡಿ, ಹಲವು ದಶಕಗಳಿಂದ ರೈತರಿಗೆ ಸಂಕಷ್ಟಗಳು ಎದುರಾಗುತ್ತಿವೆ. ಇದೀಗ ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿಮೆ ಮಾಡಿ ಅವರ ಜೀವನವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.
ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ನಂಜೇಗೌಡ ಅವರನ್ನು ಪ್ರಶ್ನೆ ಮಾಡಿದರೆ ಒಕ್ಕೂಟ ನಷ್ಟದಲ್ಲಿ ಇದೆ ಎನ್ನುತ್ತಾರೆ. ಈ ನಷ್ಟ ಬರಲು ಒಕ್ಕೂಟದ ದುಂದು ವೆಚ್ಚವೇ ಕಾರಣ ಎಂದು ಆರೋಪಿಸಿದರು. ಅಲ್ಲದೇ ಕೂಡಲೇ ಒಕ್ಕೂಟದ ಅಡಳಿತ ಮಂಡಳಿ ಶ್ವೇತ ಪತ್ರ ಹೊರಡಿಸಿ ಎಂದು ಅವರು ಆಗ್ರಹಿಸಿದರು.
ಮೋಜು ಮಸ್ತಿ ಮಾಡೋದು ಎಷ್ಟು ಸರಿ?
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್,ಲಕ್ಷ್ಮೀನಾರಾಯಣ್ ಮಾತನಾಡಿ, ರೈತ ಮತ್ತು ರೈತ ಮಹಿಳೆಯರು ಬಿಸಿಲು, ಮಳೆ, ರಾತ್ರಿ ಎನ್ನದೇ ಹೈನುಗಾರಿಕೆ ಮಾಡಿ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ನೀಡಿದರೆ, ಅದಕ್ಕೆ ಉತ್ತಮ ದರ ನೀಡದೆ ನಮ್ಮ ಹಣದಲ್ಲಿ ಮೋಜು, ಮಸ್ತಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ರೈತರನ್ನು ಕಡೆಗಣಸಿದರೆ ಸರ್ಕಾರಗಳೇ ಇರುವುದಿಲ್ಲ. ಇನ್ನೂ ಒಕ್ಕೂಟ ಇರುತ್ತದಯೇ?. ಹಾಲು ಉತ್ಪಾದಕರ ಕಷ್ಟವನ್ನು ಮರೆತ ಒಕ್ಕೂಟವನ್ನು ಪ್ರಶ್ನೆ ಮಾಡದೇ ಬಿಡುವುದಿಲ್ಲ. ಅವರ ಮೋಜು ಮಸ್ತಿ ಜೀವನಕ್ಕೆ ಕಡಿವಾಣ ಹಾಕಲು ನಾವು ಹೋರಾಟ ಮಾಡುತ್ತೇವೆ. ಇನ್ನು 15 ದಿನದಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಒಕ್ಕೂಟಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಸುಮಾರು ಅರ್ಧ ಗಂಟೆಗಳ ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ, ವಾಹನ ಸಾವರರು ಪರದಾಡುವಂತಾಗಿತ್ತು. ಪ್ರತಿಭಟನಯಲ್ಲಿ ಕರವೇ ತಾಲೂಕು ಅಧ್ಯಕ್ಷ ಜಿ.ಎಲ್.ಅಶ್ವತ್ಥ ನಾರಾಯಣ್ ಪ್ರಭು, ಜಯ ಕರ್ನಾಟಕದ ಜಿಲ್ಲಾ ಕಾರ್ಯಧ್ಯಕ್ಷ ಜಿ.ಎ. ಪ್ರದೀಪ್ ಅರುಣ್ ಕುಮಾರ್, ನಗರಸಭೆ ಸದಸ್ಯ ಡಿ. ಜೆ. ಚಂದ್ರಮೋಹನ್ ವಾಲ್ಮೀಕಿ ನಾಯಕ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು