ಚಿಕ್ಕಬಳ್ಳಾಪುರ: ಆನ್ಲೈನ್ನಲ್ಲಿ 2 ಸಾವಿರ ರೂ ಸಾಲ ಪಡೆದ ವ್ಯಕ್ತಿಯೋರ್ವ ವಂಚಕರ ನಗ್ನ ಸಂದೇಶ ಬೆದರಿಕೆಗೆ ಭಯಪಟ್ಟು 15 ಲಕ್ಷ ರೂ.ಗೂ ಅಧಿಕ ಹಣ ಕಳೆದುಕೊಂಡಿದ್ದಾನೆ. ಈ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಅಜ್ಮತ್ ಉಲ್ಲಾ (37) ವಂಚನೆಗೊಳಗಾದ ವ್ಯಕ್ತಿ. ಈತ ತಾಲೂಕಿನ ಬೆಳಗಾನಹಳ್ಳಿ ಬಳಿ ಇರುವ ನಂದಿನಿ ಡೈರಿಯಲ್ಲಿ ಸೂಪರ್ ವೈಸರ್ ಕೆಲಸ ಮಾಡಿಕೊಂಡು ಚಿಂತಾಮಣಿ ನಗರದ ಟಿಪ್ಪುನಗರದಲ್ಲಿ ಜೀವನ ನಡೆಸುತ್ತಿದ್ದಾನೆ. ಹಣದ ಅವಶ್ಯಕತೆಯಿಂದ ಕೆಲ ತಿಂಗಳ ಹಿಂದೆ ಸ್ನೇಹಿತನ ಮಾಹಿತಿಯಂತೆ ಆನ್ ಲೈನ್ MAJIC LOAN APPನಲ್ಲಿ 2,000 ರೂ ಲೋನ್ ಪಡೆದಿದ್ದಾನೆ. ಬಳಿಕ ಈತ ಎರಡು ಸಾವಿರಕ್ಕೆ ಈಗ 15 ಲಕ್ಷಕ್ಕೂ ಅಧಿಕ ಹಣವನ್ನು ಬಡ್ಡಿ ರೂಪದಲ್ಲಿ ಕಟ್ಟುವಂತಾಗಿದೆ.
ಘಟನೆಯ ವಿವರ: ಆ್ಯಪ್ ಮುಖಾಂತರ 2,000 ರೂ. ಸಾಲ ಪಡೆದು ಬಡ್ಡಿಯ ರೂಪವಾಗಿ 3,500 ಕಟ್ಟಿದ್ದರು. ಇವರು ಲೋನ್ ಪಡೆಯುವಾಗ ಆ್ಯಪ್‌ನ ಆನ್‌ಲೈನ್ ವಂಚಕರು ಅಜ್ಮತ್ ಉಲ್ಲಾ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ಗಳನ್ನು ಪಡೆದುಕೊಂಡಿದ್ದರು. ಅದನ್ನೇ ದುರುಪಯೋಗಪಡಿಸಿಕೊಂಡು ಬೇರೆ ಬೇರೆ 20ಕ್ಕೂ ಅಧಿಕ ಲೋನ್ ಆ್ಯಪ್ಗಳ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಆ ದಾಖಲಾತಿ ನೀಡಿ ಪಡೆದುಕೊಂಡಿದ್ದಾರೆ.