ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ಪೌರಾಯುಕ್ತ ಜಿ ಎನ್ ಚಲಪತಿ ವಿರುದ್ಧ ಕೋಟ್ಯಂತರ ರೂ. ಹಣವನ್ನು ಲೂಟಿ ಮಾಡಿದ ಆರೋಪದಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ಬೋರ್ ವೆಲ್ಗಳನ್ನು ಕೊರೆಸಲು 78 ಲಕ್ಷದ 35 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಬಿಲ್ ತೋರಿಸಿ, ಲಕ್ಷಾಂತರ ರೂ. ಹಣವನ್ನು ಗುಳುಂ ಮಾಡಿದ್ದಾರೆ ಎಂದು ನಗರಸಭೆಯ ಸದಸ್ಯರೇ ಆಯುಕ್ತರ ಮೇಲೆ ದೂರಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನ ಕೂಡಲೇ ತೊಲಗಿಸಿ ಎಂದು ನಗರಸಭೆ ಸದಸ್ಯರು ಹಾಗೂ ಸ್ಥಳೀಯ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಮೂರು ತಿಂಗಳಾದ್ರು ಕುಡಿಯಲು ನೀರು ಬಿಟ್ಟಿಲ್ಲ, ಸಮರ್ಪಕವಾಗಿ ಚರಂಡಿಗಳ ನಿರ್ವಹಣೆ ಮಾಡಿಲ್ಲ, ಯಾವುದಾದ್ರು ಕೆಲಸಗಳು ಬೇಕಾದ್ರೆ ದುಡ್ಡು ಕೊಟ್ರೆ ಮಾತ್ರ, ಇಲ್ಲದಿದ್ರೆ ಕ್ಯಾರೆ ಎನ್ನುವುದಿಲ್ಲ. ನಗರದ ಹೊರವಲಯಲ್ಲಿ ಪೈಪ್ ಲೈನ್ ಅಳವಡಿಸಲು 3 ಕೋಟಿ ಖರ್ಚು ಮಾಡಿದ್ದು, ಹಳೆಯ ಬಿಲ್ಗಳನ್ನು ತೋರಿಸಿ ಕೋಟ್ಯಂತರ ರೂ. ಗಳನ್ನು ಗುಳುಂ ಮಾಡಿದ್ದಾರೆ. ಆರ್ ಟಿ ಇ ನಲ್ಲಿ ಈಗಾಗಲೇ ಅರ್ಜಿಯನ್ನು ಹಾಕಿದ್ದರೂ ಇದುವರೆಗೂ ನಮಗೆ ಮಾಹಿತಿಯನ್ನು ತಿಳಿಸುತ್ತಿಲ್ಲವೆಂದು ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಯನ್ನು ವರ್ಗಾವಣೆ ಮಾಡಲು ಪುರಸಭೆ ಸದಸ್ಯರ ಪ್ರತಿಭಟನೆ ಪೌರಕಾರ್ಮಿರಿಗೂ ಕಿರುಕುಳ ನೀಡುತ್ತಿರುವ ಭೂಪ, ಅವರನ್ನು ಕೆಲಸದಿಂದ ತಗೆದು ಒಂದು ವರ್ಷ ಕಳೆದರು ಇನ್ನೂ ಸಂಬಳ ನೀಡಿಲ್ಲವಂತೆ. ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಮಾತ್ರ ಸಂಬಳ ನೀಡುವುದಾಗಿ ಹೇಳಿಕೆ ನೀಡಿ, ನಂತರ ಯಾವುದೇ ಸಂಬಳ ನೀಡಿಲ್ಲವೆಂದು ಪೌರಕಾರ್ಮಿಕರೊಬ್ಬರು ದೂರಿದ್ದಾರೆ. ನಗರಸಭೆಯ ಸದಸ್ಯರೇ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ಅಧಿಕಾರಿಯನ್ನು ವರ್ಗಾವಣೆ ಮಾಡಿ ಇಲ್ಲವಾದರೆ ಅನಿರ್ದಿಷ್ಟವಧಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.