ಗುಡಿಬಂಡೆ :ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆ ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಗುಡಿಬಂಡೆ ಪಟ್ಟಣ ಪಂಚಾಯತ್ ಚುನಾವಣೆ : ಬಿಜೆಪಿಯಿಂದ ಇಬ್ಬರು ಕಾಂಗ್ರೆಸ್ ಸದಸ್ಯರ ಕಿಡ್ನ್ಯಾಪ್ ಆರೋಪ - ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಸದಸ್ಯರನ್ನು ಆರೋಗ್ಯ ಸಚಿವ ಕೆ.ಸುಧಾಕರ್ ಅವರ ಆಪ್ತರು ಅಪಹರಣ ಮಾಡಿದ್ದಾರೆ ಎಂದು ಶಾಸಕ ಎಸ್ ಎನ್. ಸುಬ್ಬಾರೆಡ್ಡಿ ಆರೋಪಿಸಿದ್ದಾರೆ..
ಪಟ್ಟಣದ 1ನೇ ವಾರ್ಡಿನ ರಾಜೇಶ್ ಮತ್ತು 5ನೇ ವಾರ್ಡಿನ ಗಂಗರಾಜು ಕಿಡ್ನಾಪ್ ಆದ ಕಾಂಗ್ರೆಸ್ ಸದಸ್ಯರು. ರಾಷ್ಟ್ರೀಯ ಹೆದ್ದಾರಿ 7ರ ಬಳಿಯಿರುವ ಕಾಮತ್ ಹೋಟೆಲ್ ಬಳಿ ನಮ್ಮ ಸದಸ್ಯರನ್ನು ಆರೋಗ್ಯ ಸಚಿವ ಕೆ. ಸುಧಾಕರ್ ಅವರ ಆಪ್ತರು ಅಪಹರಣ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆರೋಪಿಸಿದ್ದಾರೆ.
ಕೂಡಲೇ ಅವರನ್ನು ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿ ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರ ಅಪಹರಣದಿಂದಾಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.