ಚಿಕ್ಕಬಳ್ಳಾಪುರ: ಹೈನುಗಾರಿಕೆಯಿಂದ ಅನೇಕ ಕುಟುಂಬಗಳು ನೆಮ್ಮದಿಯಿದ ಜೀವನ ಸಾಗಿಸುವಂತಾಗಿದೆ. ಗೋವುಗಳನ್ನು ಮನೆ ಮಕ್ಕಳಂತೆ ಸಾಕಿ ಸಲುಹಿದರೆ, ಅವು ಕುಟುಂಬವನ್ನು ಪೋಷಣೆ ಮಾಡುತ್ತವೆ ಎಂದು ವಿಧಾನಸಭೆ ಉಪಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಹೈನುಗಾರಿಕೆ ಬರ ಪೀಡಿತ ಪ್ರದೇಶದ ಜೀವನಾಡಿಯಾಗಿದೆ: ವಿಧಾನಸಭೆ ಉಪಾಧ್ಯಕ್ಷ ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿ ಗೇಟ್ ಬಳಿ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಆಯೋಜಿಸಿದ್ದ ಸ್ತ್ರೀಶಕ್ತಿ ಸಹಕಾರ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸದಾ ಮಳೆಯ ಕೊರತೆಯಿಂದ ಬರಗಾಲ ಎದುರಾಗುತ್ತಿದ್ದು, ಬರ ಪೀಡಿತ ಪ್ರದೇಶದಲ್ಲಿ ಹೈನುಗಾರಿಕೆ ರೈತರ ಜೀವನಾಡಿಯಾಗಿದೆ. ಆರ್ಥಿಕ ಅಭಿವೃದ್ಧಿಗೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಈ ಹಾದಿ ಸಹಾಯಕವಾಗುತ್ತಿದೆ. ಹೈನುಗಾರಿಕೆ ಅವಲಂಬಿಸಿರುವವರಿಗೆ ಸಹಕಾರಿ ಸಂಘಗಳಿಂದ ಸಾಲ ಸೌಲಭ್ಯ ದೊರೆಯುತ್ತವೆ ಎಂದ ಅವರು, ಡಿಸಿಸಿ ಬ್ಯಾಂಕಿನಿಂದ ವಿತರಣೆಯಾಗುವ ಸಾಲವನ್ನು ಪಾರದರ್ಶಕ ಹಾಗೂ ಬಹಿರಂಗವಾಗಿ ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ 46 ಸ್ತ್ರೀಶಕ್ತಿ ಸಂಘಗಳಿಗೆ ಹಾಗೂ ಕುರುಬೂರು ರೇಷ್ಮೆ ಬೆಳೆಗಾರರ ಸಂಘದ 11 ಸದಸ್ಯರಿಗೆ ಒಟ್ಟು ₹1.25 ಕೋಟಿ ಸಾಲ ವಿತರಿಸಲಾಯಿತು.