ಗುಡಿಬಂಡೆ (ಚಿಕ್ಕಬಳ್ಳಾಪುರ):ಗಡಿನಾಡಿನ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗಡಿನಾಡಿನ ವಿದ್ಯಾರ್ಥಿಗಳ ಸಾಧನೆ ರಾಜ್ಯಕ್ಕೆ ಮಾದರಿ: ವೈ.ಎ.ನಾರಾಯಣಸ್ವಾಮಿ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಲು ಶ್ರಮವಹಿಸಿದ ಶಿಕ್ಷಕ ವರ್ಗ ಹಾಗೂ ಆಡಳಿತ ವರ್ಗಕ್ಕೆ ಅಭಿನಂದನೆ ತಿಳಿಸಿ ಅವರು ಮಾತನಾಡಿದರು.
ಗಡಿನಾಡಿನ ವಿದ್ಯಾರ್ಥಿಗಳೂ ಸಹ ಉನ್ನತ ಸಾಧನೆ ಮಾಡಬಲ್ಲರು ಎಂಬುದನ್ನು ಫಲಿತಾಂಶದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ವಿದ್ಯಾರ್ಥಿಗಳು ಸಾಬೀತು ಮಾಡಿದ್ದಾರೆ. ಇತ್ತೀಚಿಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸುವವರು ವಿರಳ. ಇಂದು ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ನನ್ನ ಆಪ್ತ ಸಹಾಯಕರ ಮಗಳು ಯುಪಿಎಸ್‍ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಆಕೆ ಕೂಡ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸರ್ಕಾರಿ ಶಾಲೆಗಳ ಬಗೆಗಿನ ತಾತ್ಸಾರ ಮನೋಭಾವ ಬಿಡಬೇಕೆಂದು ಸಲಹೆ ನೀಡಿದರು.
ನಂತರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಇಂದು ಇಡೀ ರಾಜ್ಯಕ್ಕೆ ಗುಡಿಬಂಡೆಯ ವಿದ್ಯಾರ್ಥಿಗಳ ಪರಿಶ್ರಮ ತಿಳಿದಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿಕೊಡುವುದರ ಜೊತೆಗೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ಗುಡಿಬಂಡೆಗೆ ಕೊಡುಗೆ ನೀಡಿದ್ದಾರೆ. ಈ ಸಾಧನೆಗೆ ಮುಖ್ಯವಾಗಿ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತಿ, ತಾಲೂಕು ಆಡಳಿತ ಸೇರಿದಂತೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದರು.