ಚಿಕ್ಕಬಳ್ಳಾಪುರ: ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಹೆಬ್ಬಾಳ ನಾಗವಾರ ಕೆರೆಗಳ ತ್ಯಾಜ್ಯ ಸಂಸ್ಕರಿತ ನೀರಿನಿಂದ ಯೋಜನೆಯ ವ್ಯಾಪ್ತಿಯ ಎಲ್ಲಾ ಕೆರೆಗಳು ತುಂಬುವ ಅಗತ್ಯವಿದೆ. ಮಾರ್ಗ ಮಧ್ಯೆ ಎಲ್ಲಿಯೂ ನೀರು ಅನಧಿಕೃತವಾಗಿ ತಿರುವು ಪಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ನಿನ್ನೆ ಹೆಚ್.ಎನ್.ವ್ಯಾಲಿ ನೀರು ಹರಿಯುತ್ತಿರುವ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸುವಲ್ಲಿ ಹೆಚ್.ಎನ್.ವ್ಯಾಲಿ ಯೋಜನೆ ಸಹಕಾರಿಯಾಗಿದೆ ಎಂದರು.
ಈ ಯೋಜನೆಯಿಂದ ಹರಿಯುವ ನೀರು ಯೋಜನೆ ವ್ಯಾಪ್ತಿಯ ತುದಿಯಲ್ಲಿರುವ ಕೆರೆಗೂ ಹರಿಯಬೇಕು. ಆ ಮೂಲಕ ಯೋಜನೆಯ ನಿಜವಾದ ಉದ್ದೇಶ ಈಡೇರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಆದರೆ ಬೆಂಗಳೂರಿನ ಹೆಬ್ಬಾಳ ನಾಗವಾರ ಕೆರೆ ಪ್ರದೇಶದಿಂದ ಹರಿಯುವಾಗ ಮಾರ್ಗ ಮಧ್ಯೆ ಕೆಲವು ಜಮೀನುಗಳ ರೈತರು ನೀರನ್ನು ಅನಧಿಕೃತವಾಗಿ ಉಪಯೋಗಿಸಿಕೊಳುತ್ತಿದ್ದಾರೆ ಎಂಬ ದೂರುಗಳಿವೆ. ಇದರಿಂದ ಯೋಜನೆಯ ನಿಜವಾದ ಉದ್ದೇಶಕ್ಕೆ ಧಕ್ಕೆಯಾಗಬಾರದು, ಈ ಕುರಿತು ನೀರು ಅನಧಿಕೃತ ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುವುದು. ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೂ ಶೀಘ್ರದಲ್ಲೆ ನೀರು ಹರಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ರಮೇಶ್ ಜಾರಕಿಹೊಳಿ: ಫಡ್ನವಿಸ್ ನೀಡಿದ ಅಭಯವೇನು?
ಕೋಲಾರದಲ್ಲಿ ಅಟಲ್ ಭೂಜಲ ಯೋಜನೆಯ ಕಾರ್ಯಕ್ರಮ ಪೂರ್ಣಗೊಳಿಸಿ ಇಲ್ಲಿಗೆ ಬಂದಿದ್ದೇನೆ. ಜಿಲ್ಲೆಯಲ್ಲಿ ಯಾವ ಕೆರೆಗೆ ಎಷ್ಟರ ಮಟ್ಟಿಗೆ ನೀರು ಹರಿದಿದೆ ಎನ್ನುವುದನ್ನು ನೋಡಲು ಬಂದಿದ್ದೇನೆ. 1,400 ಕೋಟಿ ವೆಚ್ಚದ ವೃಷಭಾವತಿ ವ್ಯಾಲಿ ಯೋಜನೆಯ ಮೂಲಕ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ತುಮಕೂರಿನ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆಯ ಡಿಪಿಆರ್ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ಎಚ್.ಎನ್.ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ 210 ಎಂಎಲ್‌ಡಿ ನೀರು ಕೊಡಬೇಕಾಗಿತ್ತು. ಅಷ್ಟು ಪ್ರಮಾಣದ ನೀರು ದೊರೆಯುತ್ತಿಲ್ಲ. ಆದ್ದರಿಂದ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಈಗ 100ರಿಂದ 110 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ. ಎರಡು ತಿಂಗಳ ಒಳಗೆ ಬಾಕಿ ನೀರನ್ನು ಹರಿಸಲಾಗುವುದು ಎಂದು ಹೇಳಿದರು.
ಇನ್ನೂ, ಇದೇ ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮಾತನಾಡಿದ ಸಚಿವ ಮಾಧುಸ್ವಾಮಿ, ಪಕ್ಷದಿಂದ ಸೂಚನೆ ಬಂದಿದೆ ನಾವು ಎಲ್ಲೂ ಸಾರ್ವಜನಿಕವಾಗಿ ಈ ವಿಚಾರ ಮಾತನಾಡಬಾರದು ಅಂತ. ಅದರ ಬಗ್ಗೆ ಪಕ್ಷದ ವಕ್ತಾರರು ಮಾತ್ರ ಮಾತನಾಡಲಿದ್ದಾರೆ. ನನ್ನ ಇಲಾಖೆ ವಿಚಾರ ಮಾತ್ರ ನಾನು ಮಾತನಾಡುತ್ತೇನೆ ಅಷ್ಟೇ ಎಂದು ಹೇಳಿಕೆ ಕೊಟ್ಟಿದ್ದಾರೆ.