ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್‌ಕುಮಾರ್ ಮಾಡಿರುವ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿ, ಗಡಿ ಭಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುನೀತ್ ಪುತ್ಥಳಿ ಸ್ಥಾಪನೆ ಮಾಡಬೇಕೆಂದು ಇದೇ ತಿಂಗಳ 25 ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಸ್ಥಳದ ಕೊರತೆಯಿಂದ ಮನೆಯೊಂದರಲ್ಲಿ ಪುತ್ಥಳಿ ಇಟ್ಟು ಪೂಜೆ ಮಾಡು ಪರಿಸ್ಥಿತಿ ಎದುರಾಗಿದೆ.
ಗೌರಿಬಿದನೂರು ನಗರದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಪುತ್ಥಳಿ ಸ್ಥಾಪನೆಗೆ ಕನ್ನಡ ಪರ ಸಂಘಟನೆಗಳು ಆಹ್ವಾನ ಪತ್ರಿಕೆಗಳನ್ನು ಪ್ರಿಂಟ್ ಮಾಡಿ ತಾಲೂಕಿಗೆ ಹಂಚಿದ್ದವು. ಪುತ್ಥಳಿ ಅನಾವರಣ ಮಾಡುವ ಹುಮ್ಮಸ್ಸಿನಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಪ್ರತಿಷ್ಠಾಪನೆಗೆ ಎಲ್ಲ ತಯಾರಿ ಮಾಡಿಕೊಂಡು ಗೌರಿಬಿದನೂರು ನಗರದ ಡಾ. ಹೆಚ್.ಎನ್. ಕಲಾ ಭವನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಜೊತೆಗೆ, ನಗರದ ಅಭಿಲಾಷ್ ಥಿಯೇಟರ್ ಪಕ್ಕದಲ್ಲಿ ಪುತ್ಥಳಿ ಸ್ಥಾಪನೆಗೆ ಸ್ಥಳ ಗುರುತಿಸಲಾಗಿತ್ತು. ಇನ್ನೇನು ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕು ಅನ್ನುವಷ್ಟರಲ್ಲಿ ಈ ಸ್ಥಳ ನಮ್ಮದು, ಈಗಾಗಲೇ ಸರ್ಕಲ್ಗೆ ನಾಮಕರಣ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಅಂದಿನಿಂದ ಇಂದಿನವರೆಗೂ ಮನೆಯೊಂದರಲ್ಲಿ ಪುತ್ಥಳಿ ಇಟ್ಟು ಪೂಜೆ ಮಾಡುತ್ತಿದ್ದಾರೆ.