ಚಿಕ್ಕಬಳ್ಳಾಪುರ:ರಾಜ್ಯದಲ್ಲಿ 2ನೇ ಶ್ರೀಕೃಷ್ಣ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ವಿಗ್ರಹ ಹಾಗೂ ದೇವಸ್ಥಾನ ಪ್ರತಿಷ್ಠಾಪನೆ ಮಹೋತ್ಸವವನ್ನು 3 ದಿನಗಳಿಂದ ತಾಲೂಕಿನ ಕಡಶೀಗನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಸುಮಾರು 1 ವರ್ಷ 8 ತಿಂಗಳಿಂದ 1 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಉಡುಪಿಯಲ್ಲಿ ಬಿಟ್ಟರೆ ಚಿಕ್ಕಬಳ್ಳಾಪುರದಲ್ಲಿ 2ನೇ ಸ್ಥಾನದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ.
ಪ್ರತಿಷ್ಠಾಪನೆ ಕಾರ್ಯವನ್ನು ಕಳೆದ ಮೂರು ದಿನಗಳ ಕಾಲ ಗ್ರಾಮಸ್ಥರು ಹಾಗೂ ಜಿಲ್ಲೆಯ ಜನತೆ ಅದ್ದೂರಿಯಾಗಿ ಮಾಡಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ದಾನಿಗಳು, ಅತಿಥಿಗಳು ಭಕ್ತಾದಿಗಳು ಆಗಮಿಸಿ ಶ್ರೀಕೃಷ್ಣನ ಆಶೀರ್ವಾದ ಪಡೆದಿದ್ದಾರೆ. ಶ್ರೀಕೃಷ್ಣ ಜನ್ಮದಿನಾಚರಣೆ ಹಿನ್ನೆಲೆ ದೇವಸ್ಥಾನಕ್ಕೆ ಹಾಗೂ ಶ್ರೀಕೃಷ್ಣನ ವಿಗ್ರಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ.