ಕರ್ನಾಟಕ

karnataka

By

Published : Sep 22, 2020, 8:34 PM IST

ETV Bharat / state

ಖಾಸಗಿ ಶಿಕ್ಷಣ ಸಂಸ್ಥೆಗಳ ಅಧಿಕ ಶುಲ್ಕ ವಸೂಲಿಗೆ ಕಡಿವಾಣ ಹಾಕಿ; ಕನ್ನಡ ಸೇನೆ

ಸರಕಾರದ ನಿಯಮದಂತೆ ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಆಯಾ ಶೈಕ್ಷಣಿಕ ವರ್ಷದ ಶುಲ್ಕವನ್ನು ಸಾರ್ವಜನಿಕರಿಗೆ ಕಾಣುವಂತೆ ನೋಟೀಸ್‌ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಆದರೆ ಇದ್ಯಾವುದನ್ನೂ ಖಾಸಗಿ ಶಾಲೆಗಳು ಪಾಲಿಸುತ್ತಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಪೋಷಕರನ್ನು ವಂಚನೆ ಮಾಡುತ್ತಿದ್ದಾರೆ.

Kannada sena
ಕನ್ನಡ ಸೇನೆ

ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ಖಾಸಗಿ ಶಾಲೆ, ಶಿಕ್ಷಣ ಸಂಸ್ಥೆಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಹೆಚ್ಚುವರಿ ಶುಲ್ಕ ವಸೂಲಿ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಬಾಗೇಪಲ್ಲಿ ತಾಲೂಕು ಕನ್ನಡ ಸೇನೆ ಅಧ್ಯಕ್ಷ ರವೀಂದ್ರ ರವರ ನೇತೃತ್ವದಲ್ಲಿ ಹಾಗೂ ಕನ್ನಡ ಸೇನೆ ಪದಾಧಿಕಾರಿಗಳು ಬಾಗೇಪಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಹೆಚ್.ಮಹಮ್ಮದ್ ಖಲೀಲ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕನ್ನಡ ಸೇನೆ ಗೌರವಾಧ್ಯಾಕ್ಷ ಬಾಬಾಜಾನ್, ತಾಲೂಕಿನಲ್ಲಿರುವ ಖಾಸಗಿ ಶಾಲೆ, ಶಿಕ್ಷಣ ಸಂಸ್ಥೆಗಳು ಸರಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿವೆ. ಜಿಲ್ಲೆಯು ಸತತ ಬರಗಾಲಕ್ಕೆ ತುತ್ತಾಗಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ರೈತಾಪಿ, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು ಕೂಲಿ ಮಾಡಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅದರ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉಜ್ವಲ ಭವಿಷ್ಯ ರೂಪಿಸಬೇಕು ಎಂಬ ದಿಸೆಯಲ್ಲಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಾರೆ. ಆದರೆ, ಅದನ್ನೇ ಬಂಡವಾಳ ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸರಕಾರದ ನಿಯಮದಂತೆ ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಆಯಾ ಶೈಕ್ಷಣಿಕ ವರ್ಷದ ಶುಲ್ಕವನ್ನು ಸಾರ್ವಜನಿಕರಿಗೆ ಕಾಣುವಂತೆ ನೋಟೀಸ್‌ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಆದರೆ ಇದ್ಯಾವುದನ್ನೂ ಖಾಸಗಿ ಶಾಲೆಗಳು ಪಾಲಿಸುತ್ತಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಪೋಷಕರನ್ನು ವಂಚನೆ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕ್ರಮ ಕೈಗೊಂಡು ಆ ಶಾಲೆಯ ಪರವಾನಿಗೆಯನ್ನು ರದ್ದು ಮಾಡಬೇಕು ಎಂದರು.

ಕನ್ನಡ ಸೇನೆ ಅಧ್ಯಕ್ಷ ರವೀಂದ್ರ ಮಾತನಾಡಿ, ಕೊರೊನಾ ಸಂಕಷ್ಟ, ಸೋಂಕು, ಸಾವು ನೋವುಗಳು ದಿನೇ ದಿನೇ ಏರುತ್ತಲೇ ಇದೆ. ಸಮಾಜದ ಆರೋಗ್ಯದ ಸ್ವಾಸ್ಥ್ಯ ಆತಂಕದಲ್ಲಿದೆ. ಶಾಲೆಗಳನ್ನು ಪ್ರಾರಂಭ ಮಾಡಬೇಕೆ, ಬೇಡವೇ ಎಂಬ ಸಂದಿಗ್ಧತೆಯಲ್ಲಿ ಸರ್ಕಾರವಿದೆ. ಈ ನಡುವೆ ಖಾಸಗಿ ಶಾಲೆಗಳು ಆನ್‍ಲೈನ್ ಶಿಕ್ಷಣ ನೆಪದಲ್ಲಿ ಪಾಲಕರನ್ನು ಶೋಷಿಸುವ ಕೆಲಸಕ್ಕೆ ಮುಂದಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಧನದಾಹಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ರಾಜ್ಯದಲ್ಲಿರುವ ಬಹುತೇಕ ಶಿಕ್ಷಣ ಸಂಸ್ಥೆಗಳು ಈಗಾಗಲೇ ವಸೂಲಾತಿಗೆ ಇಳಿದಿವೆ. ಎಲ್ಲಾ ಪೋಷಕರಿಗೂ ವಾಟ್ಸಾಪ್, ಇ-ಮೇಲ್‍ಗಳ ಮೂಲಕ ಶುಲ್ಕ ವಿವರಗಳನ್ನು ರವಾನಿಸುತ್ತಿವೆ ಎಂದು ಹೇಳಿದರು.

ಕನ್ನಡ ಸೇನೆ ಪ್ರಧಾನ ಕಾರ್ಯದರ್ಶಿ ಮುನಿರಾಜ್ ಮಾತನಾಡಿ, ಕೊರೊನಾ ಹೊಡೆತದಿಂದ ಇಡೀ ಸಮಾಜದ ಆರ್ಥಿಕ ವ್ಯವಸ್ಥೆ ಇನ್ನಿಲ್ಲದಂತೆ ಹದಗೆಟ್ಟಿದ್ದು, ಬಹುತೇಕ ಪೋಷಕರು ಶಾಲೆಗಳಿಗೆ ಶುಲ್ಕ, ಡೊನೇಷನ್‍ಗಳನ್ನು ಮಾಮೂಲಿನಂತೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರವೇನಾದರೂ ನೆರವಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಖಾಸಗಿಯವರಿಗೆ ಕಟ್ಟಪ್ಪಣೆ ಮಾಡಿದೆ. ಆದರೆ, ಖಾಸಗಿಯವರು ಈ ಯಾವ ನಿಯಮವನ್ನು ಕಿವಿ ಮೇಲೆ ಹಾಕಿಕೊಳ್ಳದೆ ಶುಲ್ಕ ವಸೂಲಿಯೇ ನಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ದಿನಕ್ಕೊಂದು ನಿಯಮವನ್ನು ಮಾಡಿಕೊಂಡು ಪೋಷಕರಿಂದ ಸುಲಿಗೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.

ABOUT THE AUTHOR

...view details