ಚಿಕ್ಕಬಳ್ಳಾಪುರ:ಹಾಡಹಗಲೇ ಕಳ್ಳತನ ಮಾಡಿದ್ದ ಆರೋಪಿಗಳನ್ನು ಎರಡೇ ದಿನಗಳಲ್ಲಿ ಪತ್ತೆ ಹಚ್ಚಿ ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಟ್ಲಹಳ್ಳಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕಳವು ಮಾಡಿರುವ ಪ್ರಕರಣ ದಾಖಲಾದ ಎರಡೇ ದಿನದಲ್ಲಿ 3 ಆರೋಪಿಗಳನ್ನು ಬಂಧಿಸಿದ್ದು, ಕಳವು ಮಾಡಿದ್ದ ಮಾಲ್ನ್ನು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿನ್ನಾಭರಣ ನಗದು ಜಪ್ತಿ:ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದ ಸೂರ್ಯಪ್ರಕಾಶ್, ಕೊರಕೋನಪಲ್ಲಿಯ ಕಾಜಾವಲ್ಲೀ, ಗೌನಿಪಲ್ಲಿಯ ಚೇತನ್ ಬಂಧಿತ ಆರೋಪಿಗಳು. ಬಂಧಿತರಿಂದ 3.60 ಲಕ್ಷ ರೂ ಬೆಲೆ ಬಾಳುವ 60 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 85 ಸಾವಿರ ನಗದು ಹಣವನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಯರ್ರಕೋಟೆಯ ವೆಂಕಟೇಶ್ ಪತ್ತೆಗಾಗಿ ವಿಶೇಷ ತಂಡ ರಚಿಸಿ ಪೊಲೀಸರು ಜಾಲ ಬೀಸಿದ್ದಾರೆ.
ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬಾಲಹಳ್ಳಿ ಗ್ರಾಮದ ಮಂಜುನಾಥ ರೆಡ್ಡಿ ಎಂಬುವವರ ಮನೆಯ ಬೀಗವನ್ನು ಹಾಡಗಲೇ ಮುರಿದು ಮನೆಯಲ್ಲಿಟ್ಟಿದ್ದ 74 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 1.20 ಲಕ್ಷ ನಗದು ಹಣವನ್ನು ಕಳ್ಳರು ಫೆಬ್ರವರಿ 28 ರಂದು ಕಳ್ಳತನ ಮಾಡಿಕೊಂಡು ಹೋಗಿದ್ದರು. ಬೆಳಗ್ಗೆ ಬೀಗ ಹಾಕಿಕೊಂಡು ತೋಟದ ಕೆಲಸಕ್ಕೆ ಹೋಗಿದ್ದ ಮಂಜುನಾಥರೆಡ್ಡಿ ದಂಪತಿ ಮಧ್ಯಾಹ್ನ ಮನೆಗೆ ವಾಪಸ್ ಬಂದು ನೋಡಿದಾಗ, ಕಳ್ಳತನ ನಡೆದಿರುವುದು ಬಯಲಿಗೆ ಬಂದಿದೆ. ಹಾಡಹಗಲೇ ಕಳ್ಳತನ ನಡೆದಿರುವುದಕ್ಕೆ ದಂಪತಿ ಅನುಮಾನಗೊಂಡು ಮನೆಯ ನೆರೆಹೊರೆಯವರನ್ನು ವಿಚಾರಿಸಿದ್ದಾರೆ. ಆದರೂ ಯಾವುದೇ ಸುಳಿವು ಸಿಗದೇ ಮತ್ತಷ್ಟು ಗಾಬರಿಗೊಂಡಿದ್ದಾರೆ. ತಕ್ಷಣ ಸಮೀಪದ ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ,ಪರಿಶೀಲನೆ ನಡೆಸಿದರು. ಆದರೆ, ಪೊಲೀಸ್ರಿಗೆ ಇದೊಂದು ಸವಾಲಾಗಿತ್ತು. ಹಾಡಹಗಲಲ್ಲೇ ಈ ರೀತಿ ಬೀಗ ಮುರಿದು ಕಳ್ಳತನ ನಡೆದಿರುವುದು ಜನರಲ್ಲಿ ಆತಂಕ ಎದುರಾಗಿತ್ತು. ಕಳ್ಳರನ್ನು ಪತ್ತೆ ಮಾಡಲು ಎಎಸ್ಪಿ ಕುಶಾಲ್ ಚೌಕ್ಸೆ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಜಿ.ಪುರುಷೋತ್ತಮ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ತಂಡದವರು ಮಾಹಿತಿಗಳನ್ನು ಕಲೆಹಾಕಿ ಮಾರ್ಚ್ 2 ರಂದು ಗುರುವಾರ ಆರೋಪಿಗಳನ್ನು ಬಂಧಿಸಿದ್ದಾರೆ.