ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಣ ವಾಗ್ಯುದ್ಧ ಮತ್ತಷ್ಟು ಜೋರಾಗಿದೆ. ತಾಕತ್ ಇದ್ದರೆ ಶಾಸಕ ಪ್ರದೀಪ್ ಈಶ್ವರ್ ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲ್ಲಿ ಎಂದು ಮಾಜಿ ಆರೋಗ್ಯ ಸಚಿವ ಸುಧಾಕರ್ ಸವಾಲು ಹಾಕಿದ್ದಾರೆ. ನಾನು ಬಿಜೆಪಿ ಪಕ್ಷ ಬಿಟ್ಟು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಸಚಿವರ ಈ ಹೇಳಿಕೆಗೆ ಇದೀಗ ಶಾಸಕರ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಪಕ್ಷ ಸುಧಾಕರ್ ಅವರನ್ನು ಹೊರ ಹಾಕಿದೆಯಾ ಎಂದು ಪ್ರಶ್ನಿಸಿರುವ ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅವರು ದ್ರೋಹ ಮಾಡಿದ್ದರು. ಸೋತ ಮೇಲೆ ಕಳೆದ ಎರಡು ತಿಂಗಳಿಂದ ಏನು ಮಾತಾನಾಡಿಲ್ಲ, ಹೀಗಾಗಿ ಅವರು ಮತ್ತೆ ಕಾಂಗ್ರೆಸ್ ಪಕ್ಷದ ಕದ ತಟ್ಟಲು ಬರುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಅವರನ್ನು ಸೇರಿಸಿಕೊಳ್ಳಲು ರೆಡಿ ಇಲ್ಲ. ಮುಂದಿನ ದಿನಗಳಲ್ಲಿ ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದು ಕೂಡ ಡೌಟ್. ಇನ್ನು ಕ್ಷೇತ್ರದಲ್ಲಿ ಸುಧಾಕರ್ ಬೆಂಬಲಿಗರು ತಗ್ಗಿ ಬಗ್ಗಿ ನಡೆಯದಿದ್ದರೆ, ನಾನು ಸುಮ್ಮನೆ ಇರಲ್ಲ ಎಂದು ವಾರ್ನ್ ಕೂಡಾ ಕೊಟ್ಟಿದ್ದಾರೆ.
ನಾನು ಸುಧಾಕರ್ ಬೆಂಬಲಿಗರಿಗೆ ಹೇಳುವುದು ಇಷ್ಟು, ಇದು ನಮ್ಮಿಬ್ಬರ ಜಗಳ ನೀವು ಮಧ್ಯ ಬರಬೇಡಿ, ಸುಮ್ಮನೆ ಈ ಜಗಳದಲ್ಲಿ ಮಧ್ಯ ಬಂದು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಪ್ರದೀಪ್ ಈಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ.