ಚಿಕ್ಕಬಳ್ಳಾಪುರ:ಕೇಂದ್ರದಲ್ಲಿ ನರೇಂದ್ರ ಮೋದಿ ಇರುವವರೆಗೆ ಕರ್ನಾಟಕದ ಅಭಿವೃದ್ಧಿ ಖಂಡಿತ ಸಾಧ್ಯ. ಹೀಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವನ್ನು ಡಬಲ್ ವೇಗದಿಂದ ಅಧಿಕಾರಕ್ಕೆ ತರಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕರೆ ನೀಡಿದರು. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ರೋಡ್ ಶೋ ನಡೆಸಿ ಮಾತನಾಡಿದ ಅವರು ಈ ಚುನಾವಣೆ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ನಿರ್ಣಯಿಸುವ ಚುನಾವಣೆ ಆಗಿದೆ ಎಂದರು.
ನಿನ್ನೆ(ಸೋಮವಾರ) ಸಂಜೆ 4 ಗಂಟೆಗೆ ಶಿಡ್ಲಘಟ್ಟದ ನೆಹರು ಕ್ರೀಡಾಂಗಣಕ್ಕೆ ಹೆಲಿಕಾಪ್ಟಾರ್ ಮೂಲಕ ಆಗಮಿಸಿದ ನಡ್ಡಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಚಿಕ್ಕಬಳ್ಳಾಪುರದ ಶಾಸಕರು ಮತ್ತು ಸಚಿವರಾದ ಸುಧಾಕರ್, ಸೀಕಲ್ ರಾಮಚಂದ್ರ ಗೌಡ ಮತ್ತು ಮಾಜಿ ಶಾಸಕರಾದ ಎಂ ರಾಜಣ್ಣ ಅವರು ಶಾಲು ಹೊದಿಸಿ ಹೂ ಗುಚ್ಛ ನೀಡಿ ಸ್ವಾಗತಿಸಿದರು. ನಗರದ ಬಿಜೆಪಿ ಕಚೇರಿ ಸೇವಾಸೌಧ ಬಳಿ ಬ್ಯಾಂಡ್, ತಮಟೆ, ಡೊಳ್ಳು, ವೀರಗಾಸೆ, ಪಟಾಕಿ ಸಿಡಿಸಿ ಮತ್ತು 1008 ಕಳಸಗಳನ್ನು ಹೊತ್ತ ಮಹಿಳೆಯರಿಂದ ನಡ್ಡಾ ಅವರನ್ನು ಕಚೇರಿಗೆ ಸಾಂಸ್ಕೃತಿಕವಾಗಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ನಡ್ಡಾ ಅವರು "ಸೀಕಲ್ ರಾಮಚಂದ್ರ ಗೌಡ ಮತ್ತು ಸುಧಾಕರ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಚುನಾವಣೆ, ನಂದಲ್ಲ, ರಾಮಚಂದ್ರ ಗೌಡರದ್ದು ಅಲ್ಲ. ನಿಮ್ಮದು, ನಿಮ್ಮ ವಿಕಾಸಕ್ಕೆ ನೀವೇ ಆರಿಸಿಕೊಳ್ಳುವಂತಹ, ಉಪಯೋಗ ಪಡೆದುಕೊಳ್ಳುವಂತಹ ಚುನಾವಣೆ ಇದು. ವಿಕಾಸದಲ್ಲಿ ತುಂಬಾ ದೂರ ನಾವು ಪ್ರಯಾಣಿಸಬೇಕಿದೆ. ನಮ್ಮ ಡಬ್ಬಲ್ ಎಂಜಿನ್ ಸರ್ಕಾರವನ್ನ ಡಬಲ್ ವೇಗದಿಂದ ಅಧಿಕಾರಕ್ಕೆ ತರಲು ಮತ ಚಲಾಯಿಸೋಣ. ನಮ್ಮ ಗುರಿ ಸ್ಪಷ್ಟ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ನಿಮ್ಮ ಅಭಿವೃದ್ಧಿಗೆ ಕೆಲಸ ಮಾಡಿದೆ. ಭಾರತೀಯ ಜನತಾ ಪಾರ್ಟಿಯ ಬೊಮ್ಮಾಯಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರೋಣ. ದೇಶ ವಿರೋಧಿ ಪಿಎಫ್ಐಯನ್ನು ಹೊಡೆದೋಡಿಸಿದ್ದು ನಮ್ಮ ಮೋದಿ ಸರ್ಕಾರ. ಭಯೋತ್ಪಾದಕರನ್ನು ಹೊಡೆದೋಡಿಸಲು ಕಮಲದ ಚಿನ್ಹೆಯನ್ನು ಮತ್ತೆ ಮೇ 10ಕ್ಕೆ ಒತ್ತಬೇಕು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎಂದು ಅವರು ಪುನರುಚ್ಚರಿಸಿದರು.