ಗುಡಿಬಂಡೆ/ ಚಿಕ್ಕಬಳ್ಳಾಪುರ:ಜನತೆ ತಮ್ಮ ಸಮಸ್ಯೆಗಳ ಬಗ್ಗೆ ಮೌಖಿಕವಾಗಿ ದೂರು ನೀಡದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯ ಬಗ್ಗೆ ನೇರವಾಗಿ ಲಿಖಿತ ರೂಪದಲ್ಲಿ ದೂರು ನೀಡಿದಾಗ ತಮ್ಮ ಸಮಸ್ಯೆಯನ್ನು ನಿಗಧಿತ ಸಮಯದಲ್ಲಿ ಬಗೆಹರಿಸುವುದಾಗಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿಳಿಸಿದರು.
ಕಂದಾಯ ಇಲಾಖೆಯಿಂದ ಜನಸ್ಪಂದನಾ ಕಾರ್ಯಕ್ರಮ.. ಪಟ್ಟಣದ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ನಡೆಸಿದ ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಎಲ್ಲರೂ ಮೌಖಿಕವಾಗಿ ತಾಲೂಕು ಕಚೇರಿಯಲ್ಲಿ ಕೆಲಸಗಳಾಗುತ್ತಿಲ್ಲ ಎಂದು ದೂರು ನೀಡಿರುವುದು ಸಾಮಾನ್ಯ. ಆದರೆ, ತಾವು ನೀಡಿದ ದೂರಿನಲ್ಲಿ ಯಾವ ಅಧಿಕಾರಿ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿಸದೇ ಇರುವ ಕಾರಣ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟಕರ. ಆದ್ದರಿಂದ ತಾವುಗಳು ಲಿಖಿತ ರೂಪದಲ್ಲಿ ತಮಗೆ ಯಾವ ಅಧಿಕಾರಿಯಿಂದ ಕೆಲಸವಾಗಬೇಕಿದೆ ಎಂಬುದನ್ನು ನೀಡಿದಾಗ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಈ ಸಭೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಫಾರಂ 53 ಅನ್ವಯ ಅರ್ಜಿ ಹಳೆಯ ದರಖಾಸ್ತು ಸಮಿತಿಯಲ್ಲಿ ಪರಿಶೀಲನೆ ಮಾಡಿರುವ 80 ಅರ್ಜಿಗಳ ಪೈಕಿ 30 ಫಲಾನುಭವಿಗಳಿಗೆ ಪಹಣಿ ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ನಾನೇ ಖುದ್ದು ಅರ್ಜಿದಾರರ ಜಮೀನು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ಒಂದು ತಿಂಗಳ ಒಳಗಾಗಿ ವಿತರಸಿಲಾಗುವುದು ಹಾಗೂ ಫಾರಂ 57ರಲ್ಲಿ ಹೊಸದಾಗಿ ಅರ್ಜಿಗಳನ್ನು ಹಾಕಿರುವವರಿಗೆ ಹೊಸ ದರಖಾಸ್ತು ಸಮಿತಿ ರಚನೆಯಾದ ನಂತರ ಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಭೂಮಿಗಾಗಿ ಹಣ ನೀಡಬೇಡಿ:ಸರ್ಕಾರದಿಂದ ಭೂ ರಹಿತರಿಗಾಗಿ ಉಚಿತ ದರಖಾಸ್ತು ಸಮಿತಿಯ ಮೂಲಕ ಭೂಮಿ ನೀಡುತ್ತಿದೆ. ಈಗಾಗಲೇ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಹಳೆಯ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದಷ್ಟು ಶೀಘ್ರ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಉಳಿದಂತೆ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ದರಖಾಸ್ತು ಸಮಿತಿ ಹೊಸದಾಗಿ ರಚನೆ ಮಾಡಬೇಕಿದೆ. ಅದನ್ನು ಆದಷ್ಟೂ ಬೇಗ ಸಿದ್ದಮಾಡಿ ಆ ಅರ್ಜಿಗಳನ್ನು ವಿಲೇವಾರಿ ಮಾಡುತ್ತೇನೆ. ಈ ಬಾರಿ ನಾನೇ ಖುದ್ದು ಅಧಿಕಾರಿಗಳೊಡನೆ ತಮ್ಮ ಗ್ರಾಮಗಳಿಗೆ ಭೇಟಿ ನೀಡಿ ಅರ್ಹರನ್ನು ಪತ್ತೆ ಮಾಡಿ ಭೂಮಿ ನೀಡುವ ಕೆಲಸ ಮಾಡುತ್ತೇನೆ. ಯಾವುದೇ ಅಧಿಕಾರಿಗಳಾಗಲಿ ಅಥವಾ ಮಧ್ಯವರ್ತಿಗಳಿಗಾಗಲಿ ಹಣ ನೀಡಬೇಡಿ ಎಂದರು.
ತಾಲೂಕಿನಾದ್ಯಂತ ವಸತಿ ರಹಿತರಿಗೆ ನಿವೇಶನ ನೀಡಲು ಈಗಾಗಲೇ ಜಾಗ ಸಹ ಮಂಜೂರಾಗಿದೆ. ಫಲಾನುಭವಿಗಳ ಪಟ್ಟಿಯನ್ನು ತಂತ್ರಾಂಶದಲ್ಲಿ ಗಣಕೀಕರಣ ಗೊಳಿಸಬೇಕಿರುವುದರಿಂದ ಪಂಚಾಯತ್ ಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನೆವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.