ಚಿಕ್ಕಬಳ್ಳಾಪುರ: ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ನಾರಾಯಣ ಸ್ವಾಮಿಯವರ ಮನೆಗೆ ನುಗ್ಗಿ, ಮಗ ಶರತ್ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧನದಲ್ಲಿರುವ ಮೂವರು ಅಂತಾರಾಜ್ಯ ದರೋಡೆಕೋರರು ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಬಿಜ್ನೂರು ಜಿಲ್ಲೆಯ ಬಹಿರಂ ನಗರದ ಆರೀಫ್(35), ರಾಮ್ಪುರ ಜಿಲ್ಲೆಯ ಮಿಲಕ್ ತಾಲೂಕಿನ ಚಿಂತಮಾನ್ ಖಾತೆ ಗ್ರಾಮದ ಜಮಷೇದ್ ಖಾನ್ (27), ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಕದಿರಿ ನಗರದ ನಿಝಾಮ್ ಅಲಿ ಕಾಲೋನಿಯ ನಿವಾಸಿ ಪಠಾನ್ ಮೊಹ್ಮದ್ ಹ್ಯಾರೀಸ್ ಖಾನ್ (30) ಬಂಧಿತರು.
ಮೂವರು ಅಂತಾರಾಜ್ಯ ದರೋಡೆಕೋರರ ಬಂಧನ ಬಂಧಿತರಿಂದ 3 ಗನ್, 46 ಬುಲೆಟ್‌ಗಳು ಸೇರಿದಂತೆ 3 ಲಕ್ಷ 41 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಬ್ರೀಜಾ ಕಾರು, 71.702 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಬೆಳ್ಳಿಯ 21 ಪೂಜೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ:ನ. 9 ರ ರಾತ್ರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಎಸ್‌ಐ ನಾರಾಯಣ ಸ್ವಾಮಿಯವರ ಮನೆಗೆ ನುಗ್ಗಿದ ದರೋಡೆಕೋರರು ಅವರ ಮಗ ಶರತ್ ಮೇಲೆ ಗುಂಡು ಹಾರಿಸಿ, ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಎಎಸ್ಐ ಮಗನಿಗೆ ಶೂಟ್ ಮಾಡಿ ಮನೆಯಲ್ಲಿ ದರೋಡೆ