ಚಿಕ್ಕಬಳ್ಳಾಪುರ: ಅಂತರ್ಜಾತಿ ಮದುವೆಯನ್ನು ಒಪ್ಪದ ಪೋಷಕರು ಸಂದಾನಕ್ಕೆ ಕರೆದು ವಿಫಲರಾದ ಕಾರಣ ಪೊಲೀಸ್ ಠಾಣೆಯಲ್ಲೇ ಯುವತಿಯ ಪೋಷಕರು ಕಣ್ಣೀರು ಹಾಕಿಕೊಂಡು ಮನೆಗೆ ಹಿಂದಿರುಗಿದ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.
ಅನ್ಯ ಜಾತಿಯ ಮದುವೆಯಾದ ಕಾರಣ ಇಬ್ಬರ ಪೋಷಕರಲ್ಲಿ ಭಯದ ವಾತವರಣ ಮೂಡಿದ್ದು, ಸಾಮಾಜಿಕ ಕಾರ್ಯಕರ್ತರು ಈ ಪ್ರೇಮಿಗಳ ಪೋಷಕರ ನಡುವೆ ಒಪ್ಪಂದ ಮಾಡಿಸಲು ಮುಂದಾಗಿದ್ದರು. ಆದ್ರೆ ಅದು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಬಳ್ಳಾಪುರ ನಗರದ ಮೊಬೈಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹುಡುಗ ದೇವರಮಳ್ಳೂರಿನ ಗಂಗಾಧರ(25) ಹಾಗೂ ಶಿಡ್ಲಘಟ್ಟ ನಗರದ ಮೊಬೈಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಲದಿಮ್ಮನಹಳ್ಳಿಯ ಸೌಮ್ಯ(22) ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಪರಸ್ಪರ ಪ್ರೀತಿಸಿದ್ದ ಈ ಜೋಡಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಮನೆಯಿಂದ ಓಡಿ ಹೋಗಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಪೋಷಕರ ಗಮನಕ್ಕೆ ತಂದಿದ್ದರು.