ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸಿ ರಾಜ್ಯದ ಜನತೆಯ ಮೆಚ್ಚುಗೆ ಪಡೆದುಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ, ಕ್ಲಿನಿಕ್ ಸೇರಿದಂತೆ ಚಿಕ್ಕಬಳ್ಳಾಪುರದಲ್ಲಿ ಬಯೋಕ್ಲಿನಿಕ್ ಘಟಕ ಸ್ಥಾಪಿಸಲಾಗಿದೆ. ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಘಟಕ ಸ್ಥಾಪಿಸುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಈ ಬಾರಿ ಎಸ್ಸೆಸ್ಸೆಲ್ಲಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಬಂದಿದೆ. ಅದರ ಕೀರ್ತಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಸಲ್ಲಬೇಕು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತು ಜಿಲ್ಲೆ ಸಂಪೂರ್ಣ ಬಯಲು ಶೌಚ ಮುಕ್ತವಾಗಿದ್ದು ಸಂತಸದ ವಿಷಯ. ಬದುನಿರ್ಮಾಣ ಮಾಸಾಚರಣೆ ಅಭಿಯಾನಕ್ಕೆ ಜಿಲ್ಲೆಯಲ್ಲೇ ಮೊದಲು ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ 5,000 ಸೈಟ್‌ಗಳನ್ನು ನಿರ್ಮಿಸಿದ್ದು, ಶೀಘ್ರವೇ ಮನೆಗಳನ್ನು ನಿರ್ಮಿಸಿ ಹಂಚಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ಮನೆಯಲ್ಲಿಯೂ ಯುವ ಜನತೆಗೆ ಉದ್ಯೋಗ ನಿರ್ಮಾಣವಾಗಬೇಕು. ಇದು ನನ್ನ ಆಶಯವಾಗಿದೆ. ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಆಶ್ರಯವಾಗಬೇಕಿದೆ. ಹಾಗೆಯೇ ಗಿಡಗಳ ಪೋಷಣೆ ಹೆಚ್ಚಾಗಬೇಕು. ಅದೇ ರೀತಿ ಅರಣ್ಯ ಒತ್ತುವರಿ ಪ್ರದೇಶಗಳನ್ನು ತೆರುವುಗೊಳಿಸಬೇಕು ಎಂದು ತಿಳಿಸಿದರು.