ಚಿಕ್ಕಬಳ್ಳಾಪುರ :ಪತ್ನಿಯ ವಿವಾಹೇತರ ಸಂಬಂಧಕ್ಕೆ ಬೇಸತ್ತು ಪತಿಯೇ ಪತ್ನಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಕಾಪುರ ಗ್ರಾಮದ ಬಳಿ ನಡೆದಿದೆ. ಮೃತ ಮಹಿಳೆಯನ್ನು ಶಾನವಾಜ್ (29) ಎಂದು ಗುರುತಿಸಲಾಗಿದ್ದು, ಅಂಜುಮನ್ ಖಾನ್ ಕೊಲೆಗೈದ ಆರೋಪಿ.
ಕಳೆದ 8 ವರ್ಷಗಳ ಹಿಂದೆ ಅಲಕಾಪುರ ಗ್ರಾಮದ ನಿವಾಸಿ ಅಂಜುಮನ್ ಖಾನ್ ಆಂಧ್ರಪ್ರದೇಶದ ಹಿಂದುಪುರದ ನಿವಾಸಿ ಶಾನವಾಜ್‍ಳನ್ನು ಮದುವೆಯಾಗಿದ್ದನು. ಇಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಈ ನಡುವೆ ಪತ್ನಿ ವಿವಾಹೇತರ ಸಂಬಂಧದ ಬಗ್ಗೆ ಗಂಡನಿಗೆ ಗೊತ್ತಾಗಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಶನಿವಾರ ರಾತ್ರಿ ಅಲಕಾಪುರ ಗ್ರಾಮದ ಎಸ್‍ಡಿಎಂ ವೈನರಿ ಬಳಿ ಚಾಕುವಿನಿಂದ ಶಾನವಾಜ್ಳ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ನಗರದಲ್ಲಿರುವ ಗ್ರಾಮಾಂತರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ಶಾನವಾಜ್ಳ ವಿವಾಹೇತರ ಸಂಬಂಧದ ಬಗ್ಗೆ ತಿಳಿದ ಅಂಜುಮನ್ ಖಾನ್ ಎರಡು ತಿಂಗಳ ಹಿಂದೆ ಪತ್ನಿಯನ್ನು ಆಕೆಯ ತವರು ಮನೆ ಹಿಂದುಪುರದಲ್ಲಿ ಬಿಟ್ಟು ಬಂದಿದ್ದ. ಆದರೆ ಶನಿವಾರ ಮತ್ತೆ ಪತ್ನಿಯನ್ನು ಹಿಂದುಪುರದಿಂದ ಕರೆತಂದು ಚಿಂತಾಮಣಿ ತಾಲೂಕಿನ ಮುರಗಮಲ ಗ್ರಾಮದ ದರ್ಗಾಗೆ ಭೇಟಿ ನೀಡಿದ್ದ. ನಂತರ ಸ್ವಗ್ರಾಮಕ್ಕೆ ಬಂದು ಸಂಬಂಧಿಗಳನ್ನು ಮಾತನಾಡಿಸಿಕೊಂಡು ಹೆಂಡತಿಯನ್ನು ಹಿಂದುಪುರದ ಮನೆಯಲ್ಲಿ ಬಿಟ್ಟು ಬರುವುದಾಗಿ ತಿಳಿಸಿದ್ದ. ಆದರೆ ಅಲಕಾಪುರ ಗ್ರಾಮದ ಬಳಿ ನಡುರಸ್ತೆಯಲ್ಲಿ ಶಾನವಾಜ್ಳ ಕತ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಚೇನಹಳ್ಳಿ ಪೊಲೀಸ್ ಠಾಣೆಯ ಎಸ್ಐ ವಿಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.