ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ-ಪಾಳ್ಯಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಅನಿತಾ (24) ಎಂದು ಗುರುತಿಸಲಾಗಿದೆ.
ಅನಿತಾ ಮೂಲತಃ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾಪುರ ಗ್ರಾಮದ ನಿವಾಸಿ. ಈಕೆ ಕಳೆದ 5 ವರ್ಷದ ಹಿಂದೆ ಗೌರಿಬಿದನೂರು ತಾಲೂಕಿನ ಡಿ-ಪಾಳ್ಯ ಗ್ರಾಮದ ಸುಬ್ರಮಣಿ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ 1 ಮತ್ತು 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ ಕಳೆದ ಕೆಲ ತಿಂಗಳಿನಿಂದ ಹಣ ತರುವಂತೆ ಸುಬ್ರಮಣಿ ಪೀಡಿಸುತ್ತಿದ್ದನಂತೆ. ಇದರಿಂದ ನೊಂದ ಅನಿತಾ ಸಾವಿಗೆ ಶರಣಾಗಿದ್ದಾಳೆ. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಕೊಟ್ಟರೂ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ. ಇದೇ ಮಗಳ ಸಾವಿಗೆ ಕಾರಣವಾಗಿದೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆರೋಪಿ ಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಚೇನಹಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.