ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮೂರು ದಿನ ಸುರಿದ ಮಳೆಯಿಂದ ಹಲವು ತಾಲೂಕುಗಳಲ್ಲಿ ರೈತರ ಜಮೀನು, ತೋಟಗಳಿಗೆ ಮಳೆ ನೀರು ನುಗ್ಗಿದ್ದು, ಅಪಾರ ಹಾನಿ ಉಂಟಾಗಿದೆ.
ಚಿಕ್ಕಬಳ್ಳಾಪುರದಲ್ಲಿ ವರುಣಾರ್ಭಟಕ್ಕೆ ಅಪಾರ ಹಾನಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ:
ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ಮಳೆ ನೀರು ಕಾಲುವೆಗಳ ಮುಖಾಂತರ ಕೆರೆಗೆ ಹರಿಯುವುದರ ಬದಲಾಗಿ ರೈತರ ತೋಟಗಳಿಗೆ ನುಗ್ಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಬೆಳೆ ಹಾನಿ:
ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗುಡಿಬಂಡೆ ತಾಲೂಕುಗಳಲ್ಲಿ ರೈತರ ಹೂವಿನ ಗಿಡ, ರಾಗಿ, ಜೋಳ, ಸೌತೆಗಿಡ ಸೇರಿದಂತೆ ಬಹುತೇಕ ಬೆಳೆಗಳಿಗೆ ನೀರು ನುಗ್ಗಿದ್ದು, ಗಿಡಗಳು ಕೊಳೆಯುವ ಸ್ಥಿತಿಗೆ ತಲುಪಿವೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದೇವೆ. ತೋಟಗಳಲ್ಲಿ ನಿಂತಿರುವ ನೀರು ಹೊರಹಾಕಲು ಮೋಟಾರುಗಳನ್ನಿಟ್ಟು ನೀರು ಖಾಲಿ ಮಾಡಿದರೂ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಮತ್ತೆ ಜಲಾವೃತವಾಗಿದೆ. ನೀರು ನಿಂತ ಪರಿಣಾಮ ಹೂ ಬಿಡಿಸಲಿಕ್ಕೂ ಕಾರ್ಮಿಕರು ಬರುತ್ತಿಲ್ಲ. ತೋಟಕ್ಕೆ ಸಿಂಪಡಿಸಿದ ಔಷಧಿ ನೀರು ಪಾಲಾಗಿದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ:ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು, ನಾಳೆ ಭಾರಿ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್
ಒಂದು ಬಾರಿ ಔಷಧ ಸಿಂಪಡಣೆ ಮಾಡಬೇಕೆಂದರೆ 4 ರಿಂದ 5 ಸಾವಿರ ರೂ ಖರ್ಚು ಮಾಡಬೇಕು. ಹೂವಿನ ಗಿಡಗಳ ಕಾಂಡಗಳು ಕೊಳೆಯುವಂತಾಗಿದ್ದು, ನಾಶವಾದರೆ ನಮ್ಮ ಕುಟುಂಬ ನಿರ್ವಹಣೆ ಹೇಗೆ ಎನ್ನುವ ಆತಂಕವೂ ಕಾಡುತ್ತಿದೆ. ಬೆಟ್ಟಗಳಿಂದಲೂ ನೀರು ನಮ್ಮ ತೋಟಗಳಿಗೆ ನುಗ್ಗುತ್ತಿವೆ. ಕಾಲುವೆಯನ್ನು ಮಾಡಿ, ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದಲೂ ನೀರು ಈ ಭಾಗಕ್ಕೆ ಹರಿದು ಬಂದು ತೋಟಗಳಲ್ಲಿ ನಿಲ್ಲುತ್ತಿವೆ ಎಂದು ರೈತರು ನೋವು ವ್ಯಕ್ತಪಡಿಸಿದರು.