ಚಿಕ್ಕಬಳ್ಳಾಪುರ: ಆಯುರ್ವೇದ ಇಲಾಖೆ ನೀಡಿದ ಔಷಧದಿಂದ 10 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಮುಂದಿನ ದಿನಗಳಲ್ಲಿ 100 ರಿಂದ 200 ಸೋಂಕಿತರಿಗೆ ಅದೇ ಔಷಧ ನೀಡಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಸ್ಪಷ್ಟಪಡಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಆಯುರ್ವೇದ ಔಷಧ ಪ್ರಯೋಗಿಸಿದ್ದ 10 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಈ ಕುರಿತು ಪರೀಶಿಲನೆ ನಡೆಸಲು ಸೂಚಿಸಲಾಗಿದೆ. ಅದರ ವರದಿ ಆಧಾರದ ಮೇಲೆ 100-200 ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲಾಗುವುದು. ಆಯುರ್ವೇದ ವೈದ್ಯಡಾ. ಗಿರಿಧರ್ ಅವರ ಔಷಧ ಯಶಸ್ವಿಯಾಗಿರುವ ಬಗ್ಗೆ ವರದಿ ಬಂದಿದೆ ಎಂದು ಸಚಿವರು ತಿಳಿಸಿದರು.
ಜೂನ್ನಲ್ಲಿ ನಿವೃತ್ತಿಯಾಗುವ ವೈದ್ಯರು, ಕ್ಲಿನಿಕಲ್ ಹಾಗೂ ನಾನ್ ಕ್ಲಿನಿಕಲ್ ಸಿಬ್ಬಂದಿ ಇನ್ನೂ 6 ತಿಂಗಳು ಕೆಲಸವನ್ನು ನಿರ್ವಹಿಸಲಿ ಎಂದು ಸರ್ಕಾರ ತೀರ್ಮಾನಿಸಿದೆ. ನಿವೃತ್ತ ಸಿಬ್ಬಂದಿಯೂ ಎಲ್ಲಿಯ ತನಕ ಸರ್ಕಾರ ಆದೇಶ ಹೊರಡಿಸುತ್ತೋ ಅಲ್ಲಿಯ ತನಕ ತಾವು ಕರ್ತವ್ಯ ಮುಂದುವರೆಸುವುದಾಗಿ ತಿಳಿಸಿದ್ದಾರೆ ಎಂದರು.
ರಾಜ್ಯದಲ್ಲಿ 20 ಸಿಸಿ ಕೋವಿಡ್ ಆರೈಕೆ ಆಸ್ಪತ್ರೆಗಳನ್ನು ಮಾಡಿ, ಸುಮಾರು 10 ಸಾವಿರ ಬೆಡ್‌ಗಳನ್ನು ಮೀಸಲಿಡುವ ಕೆಲಸ ನಡೆಸಲಾಗಿದೆ. ₹207 ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಬೆಡ್ ತಯಾರಿ ಮಾಡಲಾಗುತ್ತಿದೆ. ಇದರ ಸಲುವಾಗಿಯೇ ಆಯುಶ್ ಇಲಾಖೆಯ ಡಾ. ಗಿರಿದರ್ ಅವರು ರೋಗಿಗಳ ಇಮ್ಯೂನಿಟಿ ಪವರ್(ರೋಗ ನಿರೋಧಕ ಶಕ್ತಿ) ಹೆಚ್ಚಿಸಲು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಸಚಿವರು ವಿವರಿಸಿದರು.
10 ಸಾವಿರ ಬೆಡ್ಗಳು ಸಿದ್ಧವಾಗಿವೆ. ಎಷ್ಟೇ ಸೋಂಕಿತರು ಕಂಡುಬಂದರೂ ಸಹ ಅವರನ್ನು ಆರೈಕೆ ಮಾಡುತ್ತೇವೆ. ಆಡಳಿತ ಮತ್ತು ಪ್ರತಿಪಕ್ಷ ಜೊತೆಯಾಗಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ನೇತೃತ್ವದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಎಲ್ಲವೂ ಸರಿ ಇದೆ. ಏನು ಗೊಂದಲ ಇಲ್ಲ. ಕೆಲವೊಮ್ಮೆ ಬೆಡ್ ಇಲ್ಲದಿದ್ದರೆ ಬೇರೆಡೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.