ಚಿಕ್ಕಬಳ್ಳಾಪುರ: ಕೋವಿಡ್ 19 ವೈರಸ್ ಮತ್ತು ಮಳೆಯ ಅನಾಹುತದಿಂದ ಅನೇಕ ಸಮಸ್ಯೆಗಳು ಎದುರಾಗಿದ್ದು ಬಿಜೆಪಿ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಆದ್ರೆ, ಪಂಚರತ್ನ ಯೋಜನೆ ಉದ್ದೇಶವೇ ಆರು ಕೋಟಿ ಜನರು ಉತ್ತಮವಾಗಿ ಬದುಕುವಂತೆ ಮಾಡುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಚಿಂತಾಮಣಿಯಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಹೆಚ್‌ಡಿಕೆ, ಬಿಜೆಪಿ ಸರ್ಕಾರ ಬಂದ ಬಳಿಕ ಮಕ್ಕಳಿಗೆ ಶಾಂತಿಯುತ ಬದುಕು ಕಲಿಸೋ ಬದಲು ಬೇರೆ ರೀತಿಯದ್ದನ್ನೇ ಕಲಿಸಲು ಹೊರಟಿದೆ. ನೀವು ಜನ್ಮಕೊಟ್ಟ ಮಕ್ಕಳು ಖರ್ಚಿಲ್ಲದೇ ವಿದ್ಯಾಭ್ಯಾಸ ಪಡೆಯಲು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎರಡರಿಂದ ಮೂರು ಉತ್ತಮ ಶಾಲೆ ಆರಂಭಿಸಲಾಗುವುದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಸೇರಿಸಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಸಾವಿರಾರು ಜನ ಸಾವನ್ನಪ್ಪಿದ್ದರು. ಒಂದು ಲಕ್ಷ ರೂ ಪರಿಹಾರ ಕೊಡುವುದಾಗಿ ಹೇಳಿ ಒಂದು ರೂಪಾಯಿಯನ್ನೂ ಕೂಡ ಬಿಡುಗಡೆ ಮಾಡಿಲ್ಲ. ನಾವು ಉತ್ತಮ ವೈದ್ಯರನ್ನು ನೇಮಕ ಮಾಡಿ, 24 ಗಂಟೆ ಖಾಸಗಿ ಆಸ್ಪತ್ರೆ ರೀತಿಯಲ್ಲಿ ಸೇವೆ ಸಿಗುವಂತೆ ಮಾಡುತ್ತೇವೆ. ಅನೇಕ ಜನ ಸಹಾಯ ಕೇಳಿಕೊಂಡು ಮನೆ ಬಳಿ ಬರುತ್ತಾರೆ, ನಾನು ಎಲ್ಲಿಂದ ಹಣ ತರಲಿ?. ಬೇರೆ ರಾಜಕಾರಣಿಗಳ ರೀತಿ ಖಾಸಗಿ ಶಾಲೆ ಇಟ್ಟುಕೊಂಡಿಲ್ಲ, ಬೇರೆಯವರ ರೀತಿ ಉದ್ಯಮಿ ಕೂಡ ಅಲ್ಲ. ಪ್ರತಿ ದಿನ ಸಹಾಯ ಮಾಡಬೇಕು ಅಂದ್ರೆ 50 ಲಕ್ಷ ರೂಪಾಯಿ ಬೇಕು. ಆದ್ರೆ ಅಷ್ಟು ಹಣ ಎಲ್ಲಿಂದ ತರಲಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಮಾಜಿ ಸಚಿವರು ಹತಾಶರಾಗಿದ್ದಾರೆ.. ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ