ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಜ್ಞಾನಿಗಳು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಬಾಗೇಪಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಘಟಕದ ಕಾರ್ಯಕರ್ತರು ಬಿ.ಸಿ ಪಾಟೀಲ್ ಅವರ ಪ್ರತಿಕೃತಿ ದಹಿಸುವ ಮೂಲಕ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು.
ಕೃಷಿ ಸಚಿವರ ಪ್ರತಿಕೃತಿ ದಹಿಸಿ ಹಸಿರು ಸೇನೆಯಿಂದ ಪ್ರತಿಭಟನೆ
ಎಪಿಎಂಸಿ ಮಾರಾಟ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಕೃಷಿ ಜಮೀನುಗಳನ್ನು ಶ್ರೀಮಂತರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಖರೀದಿ ಮಾಡಲು ಅವಕಾಶ ಕೊಟ್ಟು ರೈತರನ್ನು ಬೀದಿ ಪಾಲು ಮಾಡಲು ಹೊರಟಿವೆ ಎಂದು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಸಿರು ಸೇನೆ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ರೆಡ್ಡಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನೇಕ ಕಾಯ್ದೆ ಕಾನೂನುಗಳನ್ನು ತಿದ್ದುಪಡಿ ಮಾಡಿ ರೈತರಿಗೆ ಅನಾನುಕೂಲ ಮಾಡಿವೆ. ಕೊರೊನಾ ಸೋಂಕು ಇದ್ದಾಗಲೂ ರೈತರ ಕಷ್ಟಗಳನ್ನು ಅರಿಯದೆ ಅವರಿಗೆ ಗಾಯದ ಮೇಲೆ ಬರೆ ಎಳೆದಂತೆ ಅನೇಕ ತಿದ್ದುಪಡಿಗಳನ್ನು ತರಲಾಗಿದೆ ಎಂದರು.
ಎಪಿಎಂಸಿ ಮಾರಾಟ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಕೃಷಿ ಜಮೀನುಗಳನ್ನು ಶ್ರೀಮಂತರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಖರೀದಿ ಮಾಡಲು ಅವಕಾಶ ಕೊಟ್ಟು ರೈತರನ್ನು ಬೀದಿ ಪಾಲು ಮಾಡಲು ಹೊರಟಿವೆ. ರೈತರ ಮತ್ತು ರೈತ ಮುಖಂಡರ ಬಗ್ಗೆ ಮಾತನಾಡಿದ ಯಾವ ರಾಜಕಾರಣಿಗಳೂ ಅಧಿಕಾರದಲ್ಲಿ ಉಳಿಯುವುದಿಲ್ಲ. ಆದರೆ ಇರುವಷ್ಟು ದಿವಸ ರೈತರ ಹಿತಕ್ಕಾಗಿ ದುಡಿಯಬೇಕು. ಆದರೆ ಬಿ.ಸಿ.ಪಾಟಿಲ್ ಅವರು ರೈತರನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.