ಚಿಕ್ಕಬಳ್ಳಾಪುರ:ಕೊವೀಡ್ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಜನಸಾಮಾನ್ಯರಿಗೆ ಒಂದೊತ್ತಿನ ಊಟದ ವ್ಯವಸ್ಥೆಗೂ ಪೇಚಾಡುವಂತಾಗಿದೆ. ಇದರ ಸಲುವಾಗಿಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಗುಟ್ಟಹಳ್ಳಿ ದೇವಸ್ಥಾನದ ಸಂಸ್ಥಾಪಕಿ ಮಾತೃ ಶ್ರೀಅಮ್ಮನವರು ನಿತ್ಯ ಜಿಲ್ಲಾದ್ಯಂತ ಊಟವಿಲ್ಲದೇ ಪರದಾಡುತ್ತಿರುವ ನಿರ್ಗತಿಕರಿಗೆ ಊಟದ ವ್ಯವಸ್ಥೆ ಏರ್ಪಡಿಸಿದ್ದಾರೆ.
ನಿರ್ಗತಿಕರ ಹಸಿವು ನೀಗಿಸುವ ಶ್ರೀಕ್ಷೇತ್ರ ಗುಟ್ಟಹಳ್ಳಿ ಮಾತೃಶ್ರೀ ಅಮ್ಮ ಕುಂಕುಮಕಾಶಿ ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಗುಟ್ಟಹಳ್ಳಿಯ ಕೋಳಾಲಮ್ಮ ದೇವಸ್ಥಾನದ ಸ್ಥಾಪಕಿ ಅಮ್ಮನವರು ಕೊರೊನಾ ಸೋಂಕಿನ ಹಿನ್ನೆಲೆ ಜಿಲ್ಲಾದ್ಯಂತ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದು, ಜಿಲ್ಲೆಯ ಯಾವುದೇ ಮೂಲೆಯಲ್ಲಿ ಊಟವಿಲ್ಲದೇ ಪರದಾಡುತ್ತಿರುವ ನಿರ್ಗತಿಕರಿಗೆ ಊಟವನ್ನು ಏರ್ಪಡಿಸುತ್ತಿದ್ದಾರೆ. ನಿತ್ಯ 500 ಕ್ಕೂ ಹೆಚ್ಚು ನಿರ್ಗತಿಕರಿಗೆ ಅನ್ನದಾನ ಮಾಡುತ್ತಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೇ ವೇಳೆ, ಮಾತನಾಡಿದ ಅಮ್ಮನವರು ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಜನತೆ ಊಟವಿಲ್ಲದೇ ಪರದಾಡುತ್ತಿದ್ದಾರೆ. ಸದ್ಯ ಜಿಲ್ಲೆ ಲಾಕ್ಡೌನ್ ಆಗಿದ್ದ ಹಿನ್ನೆಲೆ ಹೊಟೇಲ್‌ಗಳು ಬಂದ್ ಆಗಿದೆ. ಇದರ ಸಲುವಾಗಿಯೇ ಜಿಲ್ಲಾದ್ಯಂತ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಲಾಕ್ಡೌನ್ ಸಂಪೂರ್ಣ ಮುಗಿಯುವವರೆಗೂ ಅನ್ನದಾನದ ಸೇವೆ ಮಾಡಲಿದ್ದು, ಊಟದ ವ್ಯವಸ್ಥೆ ಬೇಕಾಗಿರುವವರು ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನಿತ್ಯ 500ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ದಿನ ಕಳೆದಂತೆ ಊಟದ ವಿತರಣೆಯ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಕಳೆದ 15 ದಿನಗಳಿಂದ ಜಿಲ್ಲೆಯ ಚಿಂತಾಮಣಿ ನಗರದಾದ್ಯಂತ ಊಟದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದು ದೇವಸ್ಥಾನದ ಟ್ರಸ್ಟಿ ತಿಳಿಸಿದ್ದಾರೆ.
ಒಟ್ಟಾರೆ ಕೊರೊನಾ ಸಂದರ್ಭದಲ್ಲಿ ಊಟವಿಲ್ಲದೇ ಪರದಾಡುತ್ತಿರುವ ನಿರ್ಗತಿಕರಿಗೆ ನಿತ್ಯ ಊಟವನ್ನು ಬಡಿಸುತ್ತಿರುವುದು ಜಿಲ್ಲೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.