ಬಾಗೇಪಲ್ಲಿ: ಸೀಲ್‌ಡೌನ್ ಪ್ರದೇಶದ ಜನರಿಗೆ ತಾಲೂಕು ವಿಧಾನಸಭಾ ಕ್ಷೇತ್ರದ ಮುಖಂಡ ಹಾಗೂ ಸಮಾಜ ಸೇವಕ ಗುಂಜೂರು ಶ್ರೀನಿವಾಸ್ ರೆಡ್ಡಿ, ಅಕ್ಕಿಮೂಟೆ, ದಿನಸಿ ಸಾಮಾಗ್ರಿಗಳ ಕಿಟ್, ಹಣ್ಣು-ಹಂಪಲು ಹಾಗೂ ತರಕಾರಿ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ 22ನೇ ವಾರ್ಡ್‌ನಲ್ಲಿ ವಾಸವಿದ್ದ ಗರ್ಭಿಣಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ, ಆಕೆಗೆ ಸೋಂಕು ಹೇಗೆ ತಗುಲಿತು ಅನ್ನೋದು ನಿಗೂಢವಾಗಿಯೇ ಉಳಿದಿದೆ. ಜಿಲ್ಲಾಡಳಿತಕ್ಕೆ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಸೀಲ್‌ಡೌನ್ ಪ್ರದೇಶದ ಜನರಿಗೆ ಗುಂಜೂರು ಶ್ರೀನಿವಾಸ್ ರೆಡ್ಡಿ ಸಹಾಯ ಹಸ್ತ ಚಾಚಿದ್ದಾರೆ.
ಸದ್ಯ ಆಕೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪಕದಲ್ಲಿದ್ದ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ. ಮಹಿಳೆ ವಾಸವಿದ್ದ ಮನೆಯ ಸುತ್ತಮುತ್ತಲಿನ ಬೀದಿಗಳನ್ನು ಸೀಲ್‌ಡೌನ್ ಮಾಡಲಾದ ಹಿನ್ನೆಲೆ ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನರಿತ ಸಮಾಜ ಸೇವಕ ಆರ್ ಗುಂಜೂರು ಶ್ರೀನಿವಾಸ್‌ರೆಡ್ಡಿ ಸಹಾಯ ಮಾಡಲು ಮುಂದಾದರು.
ಆ ಭಾಗದಲ್ಲಿ ವಾಸವಾಗಿರುವ 65 ಕುಟುಂಬಗಳಿಗೆ ಆಹಾರದ ಕೊರತೆ ಉಂಟಾಗಿತ್ತು. ತಕ್ಷಣ ಅವರಿಗೆ ಒಂದು ವಾರಕ್ಕೆ ಆಗುವ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. ಇನ್ನೂ ಹಲವು ದಿನಗಳ ಕಾಲ ಸೀಲ್‌ಡೌನ್ ಮುಂದುವರಿಯಲಿದ್ದು, ಅಲ್ಲಿರುವ ಕುಟುಂಬಗಳಿಗೆ ನೆರವಿನ ಅಗತ್ಯವಿದೆ. ಈ ಸಮಯದಲ್ಲಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿರುವುದು ಉತ್ತಮ ಕೆಲಸ ಎಂದು ಈ ವಾರ್ಡ್ ಜನರು ಅಭಿಪ್ರಾಯ ಪಟ್ಟಿದ್ದಾರೆ.