ಚಿಕ್ಕಬಳ್ಳಾಪುರ:ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಹುಟ್ಟಿದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದರೆ, ಅವರ ಅವಧಿಯ ಸರ್ಕಾರದಲ್ಲಿ ರಾಜ್ಯವನ್ನು ಸಂಪೂರ್ಣ ಲೂಟಿ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ನಡೆದ ಭ್ರಷ್ಟಚಾರಗಳನ್ನು ತೇಪೆ ಹಚ್ಚುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಾರಿಗೆ ಸಚಿವ ಶ್ರೀರಾಮಲು ಜಿಲ್ಲೆಯ ಗೌರಿಬಿದನೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ತಾಲೂಕಿನ ಮಲ್ಲಸಂದ್ರದಲ್ಲಿ ವಸತಿ ನಿಲಯ ಉದ್ಘಾಟನೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ರಾಕ್ಷಸರ ಹಾಗೂ ದೆವ್ವಗಳ ಬಾಯಲ್ಲಿ ಭಗವದ್ಗೀತೆ ಎಂಬಂತೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇವರೆಲ್ಲರೂ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದರು.
ಸರ್ಕಾರದ ವಿರುದ್ಧ ಕೆಲವು ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಎಲ್ಲ ಗುತ್ತಿಗೆದಾರರಿಗೆ ನಾನು ವಿನಂತಿ ಮಾಡುತ್ತೇನೆ. ನೀವು ನಿಮ್ಮ ಸ್ವಯಂ ಪ್ರೇರಣೆಯ ಹೇಳಿಕೆ ನೀಡುತ್ತಿದ್ದೀರಾ ಅಥವಾ ಯಾರದೋ ಪ್ರಚೋದನೆಯಿಂದ ಹೇಳಿದ್ದೀರಾ ಅಂತ ಕೇಳಬೇಕಾಗುತ್ತದೆ. ನಿಮ್ಮ ಹತ್ತಿರ ಸರ್ಕಾರ, ಮಂತ್ರಿಗಳ ಭ್ರಷ್ಟಾಚಾರದ ಬಗ್ಗೆ ದಾಖಲೆ ಇದ್ದರೆ ಬಹಿರಂಗಪಡಿಸಿ.