ಚಿಕ್ಕಬಳ್ಳಾಪುರ: ಕಾಣೆಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕನೋರ್ವ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಹೊರವಲಯದಲ್ಲಿ ನಡೆದಿದೆ. ಮೃತ ವಿಶ್ವನಾಥ (42) ತಾಲೂಕಿನ ಭೂಮನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ದ್ವಿಚಕ್ರವಾಹನವನ್ನು ಹೊರಗೆ ನಿಲ್ಲಿಸುವುದಾಗಿ ಹೆಂಡತಿಗೆ ಹೇಳಿ ಹೋಗಿದ್ದ ವಿಶ್ವನಾಥ್ ತದ ನಂತರ ಮನೆಗೆ ಹಿಂತಿರುಗಲಿಲ್ಲವಂತೆ. ಅವರಿಗಾಗಿ ರಾತ್ರಿಯೆಲ್ಲಾ ಶೋಧ ನಡೆಸಿ ಇಂದು ಮುಂಜಾನೆ ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಣೆಯಾದ ವ್ಯಕ್ತಿಯ ಹುಡಕಾಟದಲ್ಲಿ ನಿರತರಾಗಿದ್ದರು. ಆದರೆ ಇಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಸಾರ್ವಜನಿಕರೊಬ್ಬರು ಪಿಎಸ್ಐ ಪ್ರಸನ್ನ ಕುಮಾರ್‌ಗೆ ಫೋನ್ ಮಾಡಿ ಬೈಪಾಸ್ ರಸ್ತೆಯ ನರ್ಸಿಂಗ್ ಕಾಲೇಜು ಮುಂಭಾಗದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.