ಚಿಕ್ಕಬಳ್ಳಾಪುರ:ಬಯಲುಸೀಮೆ ಜಿಲ್ಲೆಗಳಿಗೆ ವಿವಿಧ ಯೋಜನೆಗಳಲ್ಲಿ ನೀರು ಹರಿಸುವಲ್ಲಿ ಆ ಭಾಗದ ಶಾಸಕರು, ಸಂಸದರಿಗೆ ಕಾಳಜಿ ಇಲ್ಲ. ರೈತ ಸಂಘಗಳು ಹಲವು ಬಾರಿ ಪ್ರತಿಭಟನೆ ನಡೆಸಿ ಯೋಜನೆಗಳು ಮಂಜೂರಾದರೂ, ಅನುಷ್ಟಾನಗೊಳಿಸುವಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಂದ ವೈಫಲ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿಯಲ್ಲಿ ನಡೆದ ರೈತ ಸಮಾವೇಶದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು. ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿಯಲ್ಲಿ ನಡೆದ ರೈತ ಸಮಾವೇಶದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ಬಗ್ಗೆ ಕಿಡಿಕಾರಿದ್ದಾರೆ.
ರೈತರು ನೂರಾರು ದ್ವಿಚಕ್ರ ವಾಹನಗಳು, ಟ್ರಾಕ್ಟರ್‌ಗಳೊಂದಿಗೆ ಬೆಂಗಳೂರಿಗೆ ಜಾಥಾ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದು, ಯೋಜನೆಗಳನ್ನು ಮಂಜೂರು ಮಾಡಿಸಲಾಗಿದೆ. ಆದರೆ ಚುನಾಯಿತ ಪ್ರತಿನಿಧಿಗಳು ತಾವು ಕೆಲಸ ಮಾಡಿಸಿದ್ದೇವೆ ಎಂದು ಹೇಳಿಕೊಂಡು ಜನರನ್ನು ಮರುಳು ಮಾಡಿ ಮತ ಪಡೆಯುತ್ತಾರೆ ಎಂದು ಟೀಕಿಸಿದರು.
ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ಒದಗಿಸುವಲ್ಲಿ ಕರ್ನಾಟಕ ಸರ್ಕಾರ ಮತ್ತು ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ, 3 ಜನ ಉಪ ಮುಖ್ಯಮಂತ್ರಿಗಳಿದ್ದಾರೆ. ಹೀಗಿದ್ದರೂ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಶಕ್ತಿ ಒಬ್ಬರಿಗೂ ಇಲ್ಲ. ಪ್ರಧಾನ ಮಂತ್ರಿ ರಾಜ್ಯಕ್ಕೆ ಭೇಟಿ ನೀಡಿದಾಗ, ನೆರೆ ಪರಿಹಾರದ ಕುರಿತು ಜನರಿಗೆ ಸಾಂತ್ವನ ಹೇಳುವ ವ್ಯವಧಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ರಸ್ತೆಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಸೀಕಲ್ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.