ಚಿಕ್ಕಬಳ್ಳಾಪುರ:ಅನುಮಾನಾಸ್ಪದ ರೀತಿಯಲ್ಲಿ ಯುವತಿಯೋರ್ವಳ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಾಬಾಜಾನ್ ಎಂಬುವರ ಪುತ್ರಿ 18 ವರ್ಷದ ಫರ್ಹಾನ್ ಮೃತ ಯುವತಿ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ: ಬಾವಿಯಲ್ಲಿ ಅನುಮಾನಾಸ್ಪದ ರೀತಿ ಯುವತಿ ಶವವಾಗಿ ಪತ್ತೆ - ಚಿಕ್ಕಬಳ್ಳಾಪುರ ಮಂಡಿಕಲ್ಲು ಯುವತಿ ಆತ್ಮಹತ್ಯೆ
18 ವರ್ಷದ ಯುವತಿಯ ಶವ ಅನುಮಾನಾಸ್ಪದ ರೀತಿ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಜರುಗಿದೆ. ಮೃತದೇಹವನ್ನು ಬಾವಿಯಿಂದ ಮೇಲೆಕ್ಕೆತ್ತಲಾಗಿದ್ದು, ಸಾವಿನ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
ಫರ್ಹಾನ್ ಸೋಮವಾರ ಬೆಳಗ್ಗೆ ಸುಮಾರು 6 ಗಂಟೆಗೆ ಮನೆಯಿಂದ ಹೊರ ಹೋಗಿದ್ದಳು. ಬೆಳಗ್ಗೆ ಸುಮಾರು 11 ಗಂಟೆಯಾದರೂ ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಆಕೆಯ ಮನೆಯಿಂದ ಸುಮಾರು 400ಮೀಟರ್ ದೂರದಲ್ಲಿರುವ ಇಮಾಂ ಸಾಬಿ ಎಂಬುವರ ರಾಗಿ ಹೊಲದಲ್ಲಿರುವ ಬಾವಿಯಲ್ಲಿ ಫರ್ಹಾನ್ ಚಪ್ಪಲಿಗಳು ತೇಲುತ್ತಿರುವುದು ಕಂಡು ಬಂದಿತ್ತು. ಅನುಮಾನಗೊಂಡು ಬಾವಿಯಲ್ಲಿ ಹುಡುಕಾಡಲಾಯಿತು. ಸಿಗದೆ ಇದ್ದಾಗ ಪೆರೇಸಂದ್ರ ಪೊಲೀಸ್ ಹಾಗೂ ಗುಡಿಬಂಡೆ ಅಗ್ನಿ ಶಾಮಕ ದಳದವರ ಸಹಾಯದಿಂದ ಮರಳಿ ಹುಡಕಾಡಿದಾಗ ಯುವತಿಯ ಶವ ಪತ್ತೆಯಾಗಿದೆ.
ಯುವತಿಯ ಸಾವಿಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಪೆರೇಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ಕುರಿತು ಸತ್ಯಾಂಶ ತನಿಖೆಯ ನಂತರ ಹೊರಬರಬೇಕಿದೆ.