ಗೌರಿಬಿದನೂರು/ಚಿಕ್ಕಬಳ್ಳಾಪುರ: ಗೌರಿಬಿದನೂರು ರಾಜಕೀಯ ಆಂಧ್ರಪ್ರದೇಶದ ರಾಯಲಸೀಮೆ ಪ್ರಾಂತ್ಯದ ಫ್ಯಾಕ್ಷನಿಸಂಗೆ ಹೋಲುತ್ತದೆ. ಮೂರು ದಶಕಗಳಿಂದ ತಾಲೂಕಿನ ರಾಜಕಾರಣವು ನಾಗಸಂದ್ರದ ರೆಡ್ಡಿಗಳು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡು ಬರುತ್ತಿದ್ದಾರೆ. ಇದನ್ನು ಕೊನೆಗೊಳಿಸಲು ಗೌಡರ ರಾಜಕೀಯ ಮುನ್ನೆಲೆಗೆ ಬರುತ್ತಿದೆ.
ತಾಲೂಕಿನ ಎಚ್. ನಾಗಸಂದ್ರದಿಂದ ಆರಂಭವಾದ ರೆಡ್ಡಿ ರಾಜಕೀಯ ಅಖಾಡ, ಇದುವರೆಗೂ ಸದೃಢವಾಗಿ ಸಾಗಿ ಬಂದಿತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ನಾಗಸಂದ್ರದ ರೆಡ್ಡಿ ರಾಜಕೀಯ ಕೋಟೆಯ ಕಲ್ಲುಗಳು ಸಡಿಲವಾಗುತ್ತಿವೆ. ಇದಕ್ಕೆಲ್ಲಾ ಮುಖ್ಯ ಕಾರಣ ರೆಡ್ಡಿ ನಾಯಕರ ಪಕ್ಷಾಂತರ ಪರ್ವ.
ನಾಗಸಂದ್ರ ನಾಗರೆಡ್ಡಿಯಿಂದ ಶುರುವಾದ ರಾಜಕಾರಣ ಕಳೆದ 30 ವರ್ಷಗಳಲ್ಲಿ ಎನ್. ಎಚ್. ಶಿವಶಂಕರ ರೆಡ್ಡಿ, ಜ್ಯೋತಿ ರೆಡ್ಡಿ... ಹೀಗೆ ರೆಡ್ಡಿಗಳ ಕಪಿ ಮುಷ್ಟಿಯಲ್ಲಿ ಗೌರಿಬಿದನೂರು ರಾಜಕಾರಣ ಸಾಗಿಬಂತು. ಪಕ್ಷೇತರ, ಜೆಡಿಎಸ್, ಕಾಂಗ್ರೆಸ್ ಹೀಗೆ ಯಾವುದೇ ಪಕ್ಷ ಇದ್ದರೂ ಅಧಿಕಾರ ಮಾತ್ರ ರೆಡ್ಡಿಗಳದ್ದು ಎನ್ನುವ ವಾತಾವರಣ ತಾಲೂಕಿನಲ್ಲಿ ಇತ್ತು. ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಕಳೆದ ಎರಡುವರೆ ದಶಕದಿಂದ ಗೆದ್ದು ಬರುತ್ತಿರುವ ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಅವರನ್ನು ಮಣಿಸಲು ಅಖಾಡ ಸಿದ್ಧವಾಗುತ್ತಿದೆ.
ಗೌರಿಬಿದನೂರು ರೆಡ್ಡಿಗಳ ರಾಜಕಾರಣ ತಾಲೂಕಿನಲ್ಲಿನ ಅಸಮಾಧಾನಗೊಂಡ ನಾಯಕರಿಗೆ ಶಕ್ತಿ ತುಂಬುತ್ತಿರುವ ರೆಡ್ಡಿ ಎಂಬ ಪದ ತೆಗೆದು ಆ ಸ್ಥಾನದಲ್ಲಿ ಗೌಡ ಎನ್ನುವಂತ ರಾಜಕೀಯ ಮೇಲಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಇದಕ್ಕೆಲ್ಲ ಇತ್ತೀಚಿನ ರಾಜಕೀಯ ಪ್ರಹಸನಗಳೇ ಕಾರಣ ಎನ್ನಬಹುದು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ನಗರಸಭೆಯ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಂತರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ಲಾ ಹಿರೇಬಿದನೂರು, ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಜಿ.ಕೆ ಸತೀಶ್, ಆರ್ಎಂಸಿ ಮಾಜಿ ಅಧ್ಯಕ್ಷ ಶಿವಶಂಕರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಸೇರಿದಂತೆ ಹಲವು ಕಾಂಗ್ರೆಸಿಗರು ಪುಟ್ಟಸ್ವಾಮಿ ಗೌಡರ ಬಣಕ್ಕೆ ಸೇರ್ಪಡೆ ಆಗುತ್ತಿದ್ದಾರೆ.
'ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಪಕ್ಷದ ಹಲವು ನಾಯಕರು ಪಕ್ಷ ತೊರೆದು ನಮ್ಮ ಬಣಕ್ಕೆ ಸೇರ್ಪಡೆ ಆಗುತ್ತಾರೆ' ಎಂದು ಪುಟ್ಟಸ್ವಾಮಿ ಗೌಡ ಹೇಳಿದ್ದಾರೆ. ಗೌರಿಬಿದನೂರು ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ಅತ್ತ ಕೆಪಿಸಿಸಿ ಅಧ್ಯಕ್ಷರಾಗಿ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಇಂದು ಪದಗ್ರಹಣ ಮಾಡಲಿದ್ದಾರೆ. ಇತ್ತ ಇವರೆಲ್ಲರೂ ಹಾಲಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅವರಿಂದ ದೂರ ಸರಿಯುತ್ತಿದ್ದಾರೆ.
ಅತೃಪ್ತ ನಾಯಕರಿಗೆ ಮಣೆ ಹಾಕುವುದಕ್ಕೆ ಸಂಸದ ಬಿ.ಎನ್. ಬಚ್ಚೇಗೌಡ ಸಂಬಂಧಿ ಪುಟ್ಟಸ್ವಾಮಿಗೌಡ ಕಸರತ್ತು ನಡೆಸುತ್ತಿದ್ದಾರೆ. ಅತೃಪ್ತರೆಲ್ಲರನ್ನೂ ಒಂದು ಬಣವಾಗಿಸಿ ರೆಡ್ಡಿ ರಾಜಕೀಯ ಕೊನೆಗಾಣಿಸಿ ಗೌಡರ ರಾಜಕೀಯ ಪತಾಕೆ ಹಾರಿಸುವ ರಾಜಕೀಯ ತಂತ್ರ ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಮುಂದಿನ ಚುನಾವಣೆಯಲ್ಲಿ ಶಿವಶಂಕರ ರೆಡ್ಡಿ ಅವರನ್ನು ಮಣಿಸುವುದು ಶತಸಿದ್ಧ ಎನ್ನಬಹುದು.
ಬಿಜೆಪಿ ಕಾರ್ಯಕರ್ತ ಪವನ್ ರೆಡ್ಡಿ ಹಾಗೂ ಮಾಜಿ ನಗರಸಭಾ ಅಧ್ಯಕ್ಷ ನರಸಿಂಹಮೂರ್ತಿ ಪಕ್ಷ ತೊರೆದು ಪುಟ್ಟಸ್ವಾಮಿ ಬಣ ಸೇರಿರುವುದು ಗೌಡರ ರಾಜಕೀಯ ಪ್ರವೇಶಕ್ಕೆ ಮೊದಲ ಹೆಜ್ಜೆ ಎನ್ನಬಹುದು. ಗೌರಿಬಿದನೂರು ವಿಧಾನಸಭಾ, ಸ್ಥಳೀಯ ಚುನಾವಣೆಗೆ ಇಂದಿನಿಂದಲೇ ಅಖಾಡ ಸಿದ್ಧವಾಗುತ್ತಿದೆ. ರಾಜಕೀಯದಲ್ಲಿ ರೆಡ್ಡಿ ಹಾಗೂ ಗೌಡರ ನಡುವಿನ ಕಾಳಗ ನೋಡಲು ಕ್ಷೇತ್ರದ ಜನ ಎದುರು ನೋಡುತ್ತಿದ್ದಾರೆ.