ಚಿಕ್ಕಬಳ್ಳಾಪುರ :ಕವರ್‌ನಲ್ಲಿ ಏನೋ ಕೊಟ್ಟು ಪುಕ್ಕಟೆ ಪ್ರಚಾರ ಪಡೆಯುವ ಬದಲು, ಸರ್ಕಾರದಿಂದ ಅನುದಾನ ತಂದು ಆಸ್ಪತ್ರೆ ಅಭಿವೃದ್ಧಿ ಪಡಿಸಲಿ. ಸರ್ಕಾರಿ ಆಸ್ಪತ್ರೆ ಯಾರಪ್ಪನ ಸ್ವತ್ತಲ್ಲ. ಯೋಗ್ಯತೆ ಇದ್ದರೆ ಸರ್ಕಾರದಿಂದ ಅನುದಾನ ತಂದು ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲಿ. ಅದು ಬಿಟ್ಟು ಅಧಿಕಾರಿಗಳ ಮೇಲೆ ಧರ್ಪ ತೋರಿಸಿ ಕಾರ್ಯಕ್ರಮಗಳಿಗೆ ತಡೆಯುವುದು ಸರಿಯಲ್ಲ ಎಂದು ಚಿಂತಾಮಣಿ ಹಾಲಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ವಿರುದ್ಧ ಮಾಜಿ ಶಾಸಕ ಎಂ ಸಿ ಸುಧಾಕರ್ ಕಿಡಿಕಾರಿದ್ದಾರೆ.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ 300 ಎಲ್‌ಪಿಎಂ ಆಮ್ಲಜನಕ ತಯಾರಿ ಘಟಕದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವುದಾಗಿ ತಿಳಿಸಿದ್ದರು. ಆದರೆ, ತಾಲೂಕಿನ ಸಮಾಜ ಸೇವೆ ಗುಂಗಿನಲ್ಲಿ ಬಂದ ಮಹಾನುಭಾವರು, ನಿಮ್ಮೆಲ್ಲರ ಮತಗಳನ್ನು ಪಡೆದು ಶಾಸಕರಾದಂತಹವರು, ಅಧಿಕಾರಿಗಳಿಗೆ ಬೆದರಿಕೆ ಹಾಕಿ ಕಾರ್ಯಕ್ರಮಕ್ಕೆ ಬಂದರೆ, ಅಮಾನತು ಮಾಡಿಸುತ್ತೇನೆ, ಹಕ್ಕುಚ್ಯುತಿ ಹಾಕಿಸುತ್ತೇನೆಂದು ಬೆದರಿಕೆ ಹಾಕುವುದು ಸರಿ ಅಲ್ಲ ಎಂದರು.