ಚಿಂತಾಮಣಿ(ಚಿಕ್ಕಬಳ್ಳಾಪುರ): ಗ್ರಾಮಕ್ಕೆ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ, ಸ್ವಚ್ಛತೆ ಇಲ್ಲವೆಂದು ಹೇಳಿದ ಹಿನ್ನೆಲೆ ದೂರುದಾರರು ವಾಸಿಸುವ ಗುಡಿಸಲಿಗೆ ಬೆಂಕಿಯಿಟ್ಟ ಘಟನೆ ಚಿಂತಾಮಣಿ ತಾಲೂಕಿನ ಅಟ್ಟೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ತಳಗವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಟ್ಟೂರು ಗ್ರಾಮದ ಕವಿತಾ ಎಂಬುವರ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದೆ. ವಾಸಿಸಲು ಸೂರು ಇಲ್ಲದ ಕುಟುಂಬ ಬೀದಿಗೆ ಬಿದ್ದಿದೆ. ಸದ್ಯ ಕಿಡಿಗೇಡಿಗಳ ಪತ್ತೆಗೆ ಒತ್ತಾಯಿಸಿ ಕವಿತಾ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಕಿಡಿಗೇಡಿಗಳ ಕೃತ್ಯದ ಕುರಿತು ಮುನಿಸ್ವಾಮಿ ಮಾತನಾಡಿದರು ಬೆಂಕಿಗೆ ಮನೆಯಲ್ಲಿದ್ದ ದವಸ-ಧಾನ್ಯಗಳು, ಬಟ್ಟೆ, ದಿನನಿತ್ಯ ಬಳಸುವ ವಸ್ತುಗಳು, ಅಲ್ಪ ಮೊತ್ತದ ನಗದು ಸೇರಿದಂತೆ ಒಟ್ಟು 2 ಲಕ್ಷ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಕಳೆದ ತಿಂಗಳು ಗ್ರಾಮದಲ್ಲಿ ಸೂಕ್ತವಾದ ರಸ್ತೆ, ಚರಂಡಿಗಳ ವ್ಯವಸ್ಥೆಯಿಲ್ಲ ಎಂದು ಪಂಚಾಯತ್ ಹಾಗೂ ಮಾಧ್ಯಮಗಳಲ್ಲಿ ದೂರು ನೀಡಲಾಗಿತ್ತು. ಅಂದಿನಿಂದ ಪ್ರತಿನಿತ್ಯ ಹಲವು ಬೆದರಿಕೆಗಳು ಬರುತ್ತಿದ್ದವು. ಇದೀಗ ಏಕಾಏಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಜಕೀಯ ಬೆಂಬಲ ಇರುವವರು, ಕೆಲ ಗ್ರಾಮಸ್ಥರು ಗುಡಿಸಲಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆಂದು ಕವಿತಾ ಅವರ ಸಂಬಂಧಿ ದೂರಿದ್ದಾರೆ.
ಇದನ್ನೂ ಓದಿ:ಮಗಳಿಗೆ ತೊಂದರೆ ಕೊಡ್ಬೇಡ ಎಂದು ಬುದ್ಧಿ ಹೇಳಿದ ಯುವತಿ ತಂದೆ ಮೇಲೆ ಮಾರಣಾಂತಿಕ ಹಲ್ಲೆ
ಗ್ರಾಮದ ಕೆಲವು ಮಹಿಳೆಯರು ಹಾಗೂ ದಲಿತ ಸಂಘದ ಸದಸ್ಯರು ಕವಿತಾ ಅವರಿಗೆ ಬೆಂಬಲವಾಗಿ ನಿಂತಿದ್ದು, ಬೆಂಕಿ ಇಟ್ಟ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಘಟನೆ ಕುರಿತು ಗ್ರಾಮಾಂತರ ಠಾಣೆಗೆ ದೂರು ನೀಡುವುದಾಗಿ ತಿಳಿಸಿದರು.