ಚಿಕ್ಕಬಳ್ಳಾಪುರ:ಬಾಗೇಪಲ್ಲಿ ತಾಲೂಕಿನ ಗೂಳೂರು ಮಾರ್ಗಾನುಕುಂಟೆ ವ್ಯಾಪ್ತಿಯ ಮಾಡಪ್ಪಲ್ಲಿ ಗ್ರಾಮದಲ್ಲಿ ಬೇಸಿಗೆಯ ರಣ ಬಿಸಿಲು ದಿನದಿಂದ ದಿನಕ್ಕೆ ತೀವ್ರವಾಗತೊಡಗಿದೆ. ಕುಡಿಯುವ ನೀರಿನ ಸಮಸ್ಯೆ ಜತೆಯಲ್ಲೇ ರಾಸುಗಳ ಹಸಿರು ಮೇವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಸಿರು ಮೇವು ಖರೀದಿ ಮಾಡಲಿಕ್ಕೆ ಸಾಧ್ಯವಾಗದೆ ಪರದಾಡುವಂತಹ ಪರಿಸ್ಥಿತಿ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೆರೆ, ಕುಂಟೆಗಳಲ್ಲಿ ಒಂದು ಹನಿ ನೀರಿಲ್ಲ. ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ 1,500 ಅಡಿಗಳಿಗೆ ಕುಸಿದಿದೆ. ಕುಡಿಯುವ ನೀರಿಗಾಗಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಬಂದಿದೆ. ಸಾಲ ಮಾಡಿ ಕೊಳವೆ ಬಾವಿ ಕೊರೆಯಿಸಿದರೂ ಸಿಗುತ್ತಿರುವ ನೀರು ಇಷ್ಟೇ ದಿನ ಬರುತ್ತದೆ ಎಂದು ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ.
ಇದ್ದ ಅಲ್ಪ ಸ್ವಲ್ಪ ನೀರಿನಲ್ಲಿ ಮೇವಿನ ಬೆಳೆಗಳನ್ನಾದರೂ ಬೆಳೆದುಕೊಳ್ಳೋಣ ಅಂದರೆ ಇತ್ತೀಚೆಗೆ ಕೊಳವೆ ಬಾವಿಗಳಲ್ಲೂ ನೀರು ಬತ್ತಿ ಹೋಗುತ್ತಿದೆ. ನಾವು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ರಾಸುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಮಾಡಪ್ಪಲ್ಲಿ ರೈತ ನರಸಿಂಹಮೂರ್ತಿ ಆತಂಕ ವ್ಯಕ್ತಪಡಿಸಿದರು.