ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ವೇಷದಲ್ಲಿ ಬಂದಿದ್ದ ಇಬ್ಬರಿಗೆ ತಹಶೀಲ್ದಾರ್ ಗಣಪತಿ ಶಾಸ್ತ್ರೀ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದಾಕ್ಷಣ ಆ ನಕಲಿ ಅಧಿಕಾರಿಗಳು ತಾಲೂಕು ಕಚೇರಿಯಿಂದ ಎಸ್ಕೇಪ್ ಆದ ಘಟನೆ ನಡೆದಿದೆ.
ಥೇಟ್ ಲೋಕಾಯುಕ್ತ ಅಧಿಕಾರಿಗಳಂತೆ ನೀಟಾಗಿ ಇನ್‍ಶರ್ಟ್ ಮಾಡಿಕೊಂಡು, ಕೈಯಲ್ಲಿ ಫೈಲು ಹಿಡಿದುಕೊಂಡು ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಇಬ್ಬರು ನಕಲಿ ಅಧಿಕಾರಿಗಳು ಬಂದಿದ್ದರು. ತಹಶೀಲ್ದಾರ್ ಮುಂದೆಯೇ ಕುಳಿತು ಇವರಲ್ಲಿ ಒಬ್ಬಾತ ತನ್ನನ್ನು ಪ್ರಣವ್ ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಲೋಕಾಯುಕ್ತ ಅಧಿಕಾರಿಯಾಗಿದ್ದು, ಬೆಂಗಳೂರಿನಿಂದ ಬಂದಿದ್ದೇನೆ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಲ್ಲಿ ಹೇಳಿದ್ದಾರೆ .
ನಕಲಿ ಅಧಿಕಾರಿಗಳು ಮೊದಲು ತಾಲೂಕು ಕಚೇರಿ ಪಕ್ಕದ ಸಬ್‍ರಿಜಿಸ್ಟ್ರಾರ್ ಕಚೇರಿ ಕಡೆ ಹೋಗಿ, ಒಂದು ಗಂಟೆ ತಾಲೂಕು ಕಚೇರಿ ಸುತ್ತಲೂ ಅಲೆದಾಡಿ ಬಳಿಕ ಕಚೇರಿಯೊಳಗೆ ಬಂದಿದ್ದಾರೆ. ನೇರವಾಗಿ ಶಿರಸ್ತೇದಾರರ ಬಳಿ ತೆರಳಿ ಸೊಪ್ಪಹಳ್ಳಿ ಗ್ರಾಮದ ಸರ್ವೇ ನಂಬರ್ 103 ಸೇರಿ ಅವರಿಗೆ ಬೇಕಾದ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.