ಕರ್ನಾಟಕ

karnataka

ETV Bharat / state

ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ - check post

ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದೆ.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ

By

Published : Sep 21, 2019, 10:31 PM IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ 178- ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ತಕ್ಷಣದಿಂದಲೇ ಕಟ್ಟುನಿಟ್ಟಿನ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ

ದೇವನಹಳ್ಳಿಯ ಬೀರಸಂದ್ರ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ವೇಳಾಪಟ್ಟಿಯಂತೆ ಸೆಪ್ಟೆಂಬರ್ 23 ರಂದು ಚುನಾವಣಾ ಅಧಿಸೂಚನೆ ಹೊರಡಿಸಿ, ನಾಮಪತ್ರ ಸ್ವೀಕಾರ ಮಾಡಲಾಗುವುದು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅಕ್ಟೋಬರ್ 01 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಅಕ್ಟೋಬರ್ 03 ರಂದು ಕೊನೆಯ ದಿನವಾಗಿದೆ. ಅಕ್ಟೋಬರ್ 21 ಮತದಾನ ನಡೆಯಲಿದೆ, ಅಕ್ಟೋಬರ್ 24 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 27 ರಂದು ಚುನಾವಣಾ ನೀತಿ ಸಂಹಿತೆ ಕೊನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ರಾಜಕೀಯ ಪಕ್ಷಗಳ ಜಾಹೀರಾತಿಗೆ ಸಂಬಂಧಿಸಿದ ಎಲ್ಲಾ ಗೋಡೆಬರಹ, ಪೋಸ್ಟರ್ಸ್, ಬ್ಯಾನರ್ಸ್, ಫ್ಲೆಕ್ಸ್ ಇತ್ಯಾದಿಗಳನ್ನು ಕೂಡಲೇ ತೆರವುಗೊಳಿಸಲಾಗುವುದು. ಚುನಾಯಿತ ಪ್ರತಿನಿಧಿಗಳಿಗೆ ನೀಡಿರುವ ಸರ್ಕಾರಿ ವಾಹನ ಹಾಗೂ ಆಪ್ತ ಸಹಾಯಕರನ್ನು ಹಿಂಪಡೆಯಲಾಗುವುದು. ಸರ್ಕಾರಿ ಪ್ರವಾಸಿ ಮಂದಿರ, ಪರಿವೀಕ್ಷಣಾ ಮಂದಿರಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು. ಸರ್ಕಾರಿ ಸ್ವತ್ತು ಮತ್ತು ಸರ್ಕಾರಿ ಕಚೇರಿಗಳನ್ನು ವಿರೂಪಗೊಳಿಸಿರುವುದನ್ನು ತೆರವುಗೊಳಿಸಲಾಗುವುದು.‌ ಅಲ್ಲದೇ ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಡಲು ಚೆಕ್‍ಪೋಸ್ಟ್‌ ಆರಂಭಿಸಲಾಗುವುದು. ಚುನಾವಣೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಕಲ ಭದ್ರತೆ ಒದಗಿಸಲಾಗುವುದು ಹಾಗೇ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿಯಿಂದ ಮತದಾನದ ಅರಿವು‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ: ನೀತಿ ಸಂಹಿತೆ ಜಾರಿ

ಅನರ್ಹ ಶಾಸಕರ ತೀರ್ಪು ಕೋರ್ಟ್​ನಲ್ಲಿ ಇರುವಾಗಲೇ ಕ್ಷೇತ್ರಗಳಲ್ಲಿ ಚುನಾವಣೆ ಆಯೋಗ ಉಪಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನೀತಿಸಂಹಿತೆಯನ್ನು ಜಾರಿಗೆ ಬಂದಿದೆ.

ನೂತನ ಜಿಲ್ಲಾಧಿಕಾರಿಯಾದ ಆರ್ ಲತಾ, ಜಿಲ್ಲಾಡಳಿತ ಭವನದಲ್ಲಿ ತುರ್ತುಸಭೆ ಕರೆದಿದ್ದು ನೀತಿಸಂಹಿತೆ ಇಂದಿನಿಂದ ಜಾರಿಯಲ್ಲಿರಲಿದೆ ಎಂದು ಸೂಚಿಸಿದ್ದಾರೆ.

ಇಂದಿನಿಂದಲೇ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ತಕ್ಷಣದಿಂದಲೇ ಬ್ಯಾನರ್, ಬಂಟಿಂಗ್ಸ್, ರಾಜಕೀಯ ಪಕ್ಷಗಳ ಪ್ರಚಾರ ಸಾಮಾಗ್ರಿಗಳನ್ನು ತೆರವುಗೊಳಿಸುವಂತೆ ಎಲ್ಲಾ ನಗರಸಭೆ ಪುರಸಭೆ ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 254 ಮತಗಟ್ಟೆಗಳಿದ್ದು ಒಟ್ಟು 2,00622 ಮತದಾರರಿದ್ದಾರೆ ಎಂದು ಮಾಹಿತಿ ಒದಗಿಸಿದ್ದಾರೆ.

ಚಿಕ್ಕಬಳ್ಳಾಪುರ ಅನರ್ಹ ಶಾಸಕ ಕೆ. ಸುಧಾಕರ್ ಇಂದು ಕ್ಷೇತ್ರಾದ್ಯಂತ ಪರ್ಯಟನೆ ಮಾಡಿ ಸುಪ್ರೀಂನಲ್ಲಿ ತೀರ್ಪು ಇರುವುದರಿಂದ ಚುನಾವಣೆಯ ದಿನಾಂಕ ಮುಂದೂಡಬಹುದು ಎಂದು ಹೇಳಿಕೆ ನೀಡಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜೀನಾಮೆಯನ್ನು ನೀಡಿರುವುದು ಜಿಲ್ಲೆಯ ರಾಜಕೀಯ ವಲಯಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ, ಚುನಾವಣಾಧಿಕಾರಿ ರಘುನಂದನ್ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಹಾಜರಿದ್ದರು.

ABOUT THE AUTHOR

...view details