ಗುಡಿಬಂಡೆ/ಚಿಕ್ಕಬಳ್ಳಾಪುರ :ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ನಿಸರ್ಗ ನಿರ್ಮಿತ ಕೂರ್ಮಗಿರಿ ಎಂದೇ ಪ್ರಸಿದ್ಧಿ ಪಡೆದ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಎಲ್ಲೋಡು ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ಭಕ್ತರ ಕೈಯಿಂದ ಗಾಳಿಯಲ್ಲಿ ತೂರುತ್ತಿದ್ದ ಬಾಳೆಹಣ್ಣು, ದವನ ಲಕ್ಷ್ಮಿ ಅದಿನಾರಾಯಣಸ್ವಾಮಿ ರಥದ ಶಿಖರಾಗ್ರದ ಕಳಸವನ್ನು ತಲುಪಲು ಹಾತೊರೆಯುತ್ತಿದ್ದವು.
ತೋಳಲ್ಲಿ ಶಕ್ತಿ ತುಂಬಿಕೊಂಡ ಯುವಕರ ದಂಡು ಭಾರಿ ಗಾತ್ರದ ಕಲ್ಲಿನ ಚಕ್ರಗಳ ರಥ ಮುನ್ನಡೆಸುವ ಸವಾಲಿನ ಕೆಲಸದಲ್ಲಿ ನಾಮುಂದು ತಾಮುಂದು ಎಂದು ಬೆವರು ಹರಿಸುತ್ತಿದ್ದರು. ತಾಲೂಕಿನ ಹಳ್ಳಿಗಳಿಂದ ಟ್ರ್ಯಾಕ್ಟರ್, ಎತ್ತಿನ ಬಂಡಿಗಳಲ್ಲಿ ಕುಟುಂಬ ಸಮೇತ ಬಂದ ಹರಕೆ ಹೊತ್ತ ಭಕ್ತರು ಆದಿನಾರಾಯಣಸ್ವಾಮಿಯ ಕೃಪೆಗೆ ಪಾತ್ರರಾದರು.
ಅದ್ದೂರಿಯಾಗಿ ನಡೆದ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ.. ಪ್ರತಿ ವರ್ಷ ಮಾಘಮಾಸದಲ್ಲಿ 10 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂದು ಅದಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದ್ದು, ರಾತ್ರಿ ಹೂವಿನ ಪಲ್ಲಕ್ಕಿ ಮೆರೆವಣಿಗೆ ನಡೆಯಲಿದೆ.
ಜಾತ್ರೆಯ ಪ್ರಯುಕ್ತ ನಿತ್ಯ ಅನ್ನ ಸಂತರ್ಪಣೆ, ಪಾನಕ ಹೆಸರು ಬೇಳೆಯನ್ನು ಹಂಚುವ ಎತ್ತಿನ ಬಂಡಿಗಳು, ತಿಂಡಿ ತಿನಿಸುಗಳು, ಮನರಂಜನೀಯ ಆಟೋಟಗಳು ಆಕರ್ಷಣೀಯವಾಗಿವೆ.
ಪಂಚನಾರಾಯಣ ಕ್ಷೇತ್ರ :ಎಲ್ಲೋಡು ಗುಡಿಬಂಡೆ ತಾಲೂಕಿಗೆ ಸೇರಿದ ರಾಜ್ಯದ ಒಂದು ಪ್ರಮುಖ ಯಾತ್ರಾಸ್ಥಳ. ಪರಮ ಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದೆನಿಸಿರುವ ಲಕ್ಷ್ಮಿ ಆದಿನಾರಾಯಣಸಾಮಿ ಉಗಮ ಸ್ಥಾನವೇ ಕೂರ್ಮಗಿರಿ. ಎಲ್ಲೋಡು ಬೆಟ್ಟ ಸಂಪೂರ್ಣವಾಗಿ ಆಮೆಯಾಕಾರದಲ್ಲಿ ಇರುವುದರಿಂದ ಇದಕ್ಕೆ ಕೂರ್ಮಗಿರಿ ಎಂದು ಹೆಸರು ಬಂದಿದೆ.
ಪಂಚನಾರಾಯಣ ಕ್ಷೇತ್ರಗಳ ಉಗಮ ಸ್ಥಾನ ಎಂದು ಪುರಾಣ ಪ್ರಸಿದ್ಧವಾಗಿದೆ. ಉತ್ತರ ಭಾರತದ ಬದರಿ ಕ್ಷೇತ್ರದ ಬದರಿನಾರಾಯಣ, ಗದುಗಿನ ವೀರನಾರಾಯಣ, ಕೈವಾರ ಕ್ಷೇತ್ರದ ಅಮರನಾರಾಯಣ, ಮೇಲುಕೋಟೆ ಚೆಲುವನಾರಾಯಣ ಹಾಗೂ ಎಲ್ಲೋಡಿನ ಆದಿನಾರಾಯಣ ಶ್ರೀವಿಷ್ಣು ಅವತಾರದ ಪಂಚನಾರಾಯಣ ಕ್ಷೇತ್ರಗಳೆಂದು ಕರೆಯಲ್ಪಟ್ಟಿದ್ದು, ಮಹತ್ವ ಪಡೆದಿದೆ.
ಎಲ್ಲೋಡು ಗ್ರಾಮದ ಪೂರ್ವದಿಕ್ಕಿನಲ್ಲಿ ಪ್ರಕೃತಿ ಮಾತೆಯಿಂದ ಪವಿತ್ರ ಗಿರಿಯಾಗಿ ಕಂಗೊಳಿಸಿದೆ. ಪ್ರಕೃತಿಯಿಂದ ನಿರ್ಮಾಣವಾಗಿರುವ ಗುಹೆಯಲ್ಲಿ ಮಹಾವಿಷ್ಣುವು ಲಕ್ಷ್ಮಿ ಆದಿನಾರಾಯಣಸ್ವಾಮಿ ಎಂಬ ಹೆಸರಿನಿಂದ ಶಿಲಾ ಮೂರ್ತಿಯಾಗಿ ಉದ್ಬವಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸಿ ಲೋಕ ಕಲ್ಯಾಣ ಮಾಡುತ್ತಿದ್ದಾನೆ ಎಂಬ ನಂಬಿಕೆ ಇದೆ. ಈ ಕ್ಷೇತ್ರ ರಾಜ್ಯ ಸೇರಿ ಆಂಧ್ರ, ತಮಿಳುನಾಡು, ಒಡಿಶಾ ಮುಂತಾದ ಹೊರ ರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ.
ಬೆಟ್ಟದ ಇತಿಹಾಸ :ಕೂರ್ಮಗಿರಿ ಪುರಾಣ ರೀತ್ಯಾ ಹಿಂದೆ ಕೂರ್ಮ ಮಹರ್ಷಿ ಎಂಬ ಮುನಿವರ್ಯರು ಈ ಪ್ರದೇಶದಲ್ಲಿದ್ದ ದಟ್ಟ ಅರಣ್ಯದಲ್ಲಿ ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿದಾಗ ಆತನ ಇಷ್ಟ ದೇವರು ಬೆಟ್ಟದ ಮೇಲಿನ ಗುಹೆಯಲ್ಲಿ ಆತನಿಗೆ ದರ್ಶನವಿತ್ತ ಬಗ್ಗೆ ಉಲ್ಲೇಖವಿದೆ.
450 ವರ್ಷಗಳ ಹಿಂದೆ ಆಂಧ್ರದ ಕಡಪ ಜಿಲ್ಲೆಯಲ್ಲಿ ಭಯಂಕರ ಜಲಕ್ಷಾಮ ಉಂಟಾದಾಗ ತತ್ತರಿಸುತ್ತಿದ್ದ ಜನರನ್ನು ತಮ್ಮಲ್ಲಿದ್ದ ಐಶ್ವರ್ಯದಿಂದ ದಾನ ಧರ್ಮಗಳನ್ನು ನೆರವೇರಿಸುವ ಮೂಲಕ ಸಂತೈಸುತ್ತಿದ್ದ ಯರ್ರಪ್ಪರೆಡ್ಡಿ, ಚಿನ್ನಪ್ಪರೆಡ್ಡಿ ಎಂಬ ಸಹೋದರರು ಕಡೆಗೊಂದು ದಿನ ಬರದ ಭೀಕರತೆ ತಾಳಲಾರದೆ ತಮ್ಮ ಪರಿವಾರದೊಂದಿಗೆ ದನಕರುಗಳಿಗೆ ಮೇವನ್ನು ಅರಸುತ್ತಾ ಕೂರ್ಮಗಿರಿ ಕ್ಷೇತ್ರಕ್ಕೆ ವಲಸೆ ಬಂದು ಇಲ್ಲಿನ ವನಸಿರಿಗೆ ಮನಸೋತು, ಇಲ್ಲಿಯೇ ನೆಲೆಸಿ ಯಲವಲೋಡು ಎಂಬ ಗ್ರಾಮ ಸ್ಥಾಪಿಸಿದರು ಎಂದು ತಿಳಿದು ಬರುತ್ತದೆ.
ಪ್ರಾಕೃತಿಕ ಸೌಂದರ್ಯ:ನಿಸರ್ಗದ ಚೆಲುವನ್ನು ಹೊದ್ದಂತಿರುವ ಎಲ್ಲೋಡಿನ ಕೂರ್ಮಗಿರಿಬೆಟ್ಟ ಹತ್ತು ಹಲವು ವೈಶಿಷ್ಟಗಳಿಂದ ಕೂಡಿದೆ. ಇತ್ತೀಚೆಗೆ ಗೋಪುರ, ಬೆಟ್ಟಕ್ಕೆ ಹೋಗುವ ಮೆಟ್ಟಲುಗಳು, ಮೇಲ್ಛಾವಣಿ ವ್ಯವಸ್ಥೆ, ಬೆಟ್ಟದಲ್ಲಿರುವ ವಿಶ್ರಾಂತಿ ಮಂಟಪ ಹಾಗೂ ದೇವಾಲಕ್ಕೆ ಹೊಸ ರೂಪ ನೀಡಿರುವುದು ಕ್ಷೇತ್ರಕ್ಕೆ ಮೆರುಗು ತಂದಿದ್ದು ಬ್ರಹ್ಮ ರತೋತ್ಸವಕ್ಕೆ ಹೊಸ ಆಕರ್ಷಣೆಯಾಗಿದೆ.