ಗುಡಿಬಂಡೆ (ಚಿಕ್ಕಬಳ್ಳಾಪುರ): ತಾಲೂಕಿನಲ್ಲಿ ಒಟ್ಟು 8 ಗ್ರಾಮ ಪಂಚಾಯತ್‌ನ 119 ಸ್ಥಾನಗಳಿಗೆ ಡಿ.27ರಂದು 2ನೇ ಹಂತದ ಚುನಾವಣೆ ನಡೆಯಲಿದೆ. 73 ಮತಗಟ್ಟೆಗಳು ಸಿದ್ಧವಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಪವಿಭಾಗಾಧಿಕಾರಿ ಎ ವಿ ರಘುನಂಧನ್ ತಿಳಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡಿಬಂಡೆ ತಾಲೂಕಿನಲ್ಲಿ ಡಿ.27ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ಡಿ.11ರಿಂದ ಡಿ.16ರವರೆಗೆ ನಾಮಪತ್ರಗಳ ಸಲ್ಲಿಕೆ ಕಾರ್ಯ ಆರಂಭವಾಗಲಿದೆ.
ಡಿ. 17ರಂದು ನಾಮಪತ್ರಗಳ ಪರಿಶೀಲನೆ, ಡಿ.19 ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಅಂತಿಮವಾಗಿ ಡಿ.27ರಂದು ತಾಲೂಕಿನ 73 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.
ಮರು ಮತದಾನ ಇದ್ದಲ್ಲಿ ಡಿ.29ರಂದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ನಡೆಯಲಿದೆ. 73ರಲ್ಲಿ 13 ಅತಿಸೂಕ್ಷ್ಮ, 23 ಸೂಕ್ಷ್ಮ, 37 ಸಾಮಾನ್ಯ ಮತಗಟ್ಟೆಗಳು ಇವೆ. ಡಿ.30ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತಗಳ ಎಣಿಕೆ ಬೆಳಗ್ಗೆ 8 ರಿಂದ ನಡೆಯಲಿದೆ ಎಂದು ಮಾಹಿತಿ ನೀಡಿದರು.