ಚಿಕ್ಕಬಳ್ಳಾಪುರ/ಬೆಂಗಳೂರು:ಚಿಕ್ಕಬಳ್ಳಾಪುರ ಜಿಲ್ಲೆಯ ಸಾದೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದು ಮಧ್ಯಾಹ್ನ ಮತ್ತೆ ಭೂಮಿ ಕಂಪಿಸಿದ್ದು, ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ. ಮಧ್ಯಾಹ್ನ ಸುಮಾರು 2.16 ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬೆಂಗಳೂರಿನಿಂದ ಸುಮಾರು 66 ಕಿಲೋಮೀಟರ್ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಸಾದೇನಹಳ್ಳಿ ಗ್ರಾಮದ ಸುತ್ತ ಮುತ್ತ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 3.6 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ದೃಢಪಡಿಸಿದೆ.
ನಿನ್ನೆ ಕೂಡ ಕಂಪಿಸಿದ್ದ ಭೂಮಿ:
ಬುಧವಾರ ಬೆಳಗ್ಗೆ ಕೂಡ ಚಿಕ್ಕಾಬಳ್ಳಾಪುರ ಜಿಲ್ಲೆಯ ಬಿಸೇಗಾರಹಳ್ಳಿ, ಶೆಟ್ಟಿಗೆರೆ ಗ್ರಾಮದಲ್ಲಿ ಭೂಮಿ ಕಂಪಿಸಿತ್ತು. ಗ್ರಾಮಸ್ಥರು ಮನೆಯಿಂದ ಹೊರ ಬಂದು ಕಾಲ ಕಳೆಯುವಂತಾಗಿತ್ತು. ಚಿಂತಾಮಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ಹಾಗೂ ಮಂಡಿಕಲ್ ವ್ಯಾಪ್ತಿಯ ಹಲವು ಗ್ರಾಮಗಳಲ್ಲೂ ಇದೇ ಅನುಭವ ಉಂಟಾಗಿರುವ ಬಗ್ಗೆ ವರದಿಯಾಗಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ 2018 ರಲ್ಲೂ ಕಂಪಿಸಿದ್ದ ಭೂಮಿ:
2018ರಲ್ಲಿ ಬಾಗೇಪಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿತ್ತು, ರಿಕ್ಟರ್ ಮಾಪನದಲ್ಲಿ 3.0 ತೀವ್ರತೆ ದಾಖಲಾಗಿತ್ತು.
(ಇದನ್ನೂ ಓದಿ: Karnataka Earthquake: ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪನ)