ಚಿಕ್ಕಬಳ್ಳಾಪುರ:ಡ್ರೋನ್ ಮೂಲಕ ಔಷಧಗಳನ್ನು ಪೂರೈಕೆ ಮಾಡುವ ದೇಶದ ಮೊಟ್ಟ ಮೊದಲ ಪ್ರಯೋಗಕ್ಕೆ ಜಿಲ್ಲೆಯ ಗೌರಿಬಿದನೂರಿನಲ್ಲಿ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಡ್ರೋನ್ ಮೂಲಕ ಔಷಧ ಸಾಗಿಸುವ ದೇಶದ ಪ್ರಥಮ ಪ್ರಯೋಗ ಇದ್ದಾಗಿದ್ದು, ಜೂನ್ 18 ರಿಂದ 30-45 ದಿನಗಳವರೆಗೆ ಡ್ರೋನ್ ಮೂಲಕ ಪರೀಕ್ಷೆಯನ್ನು ನಡೆಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನೂ ಡ್ರೋನ್ ಮೂಲಕ ಔಷಧಗಳ ಪೂರೈಕೆಯನ್ನು ಬೆಂಗಳೂರಿನ ಟಿಎಎಸ್ ಸಂಸ್ಥೆ ನೇತೃತ್ವದಲ್ಲಿ ಪ್ರಯತ್ನ ಮಾಡಲಾಗುತ್ತಿದ್ದು, ಇದರ ಜೊತೆಗೆ ಟಿಎಎಸ್‌ಗೆ ನಾರಾಯಣ ಆರೋಗ್ಯ ಸಂಸ್ಥೆಯೂ ಸಹ ಸಹಭಾಗಿತ್ವವನ್ನು ಪಡೆದುಕೊಂಡಿದೆ. ಇಂದಿನಿಂದ ಅಧಿಕೃತವಾಗಿ ಡ್ರೋನ್ ಮೂಲಕ ಔಷಧಗಳ ಸಾಗಣೆ ಮಾಡಲು ಚಾಲನೆ ನೀಡಲಾಯಿತು.
ಟಿಎಎಸ್ ಜೊತೆಗೆ ವೃತ್ತಿಪರ ಡ್ರೋನ್ ಅಪ್ಲಿಕೇಷನ್‌ಗಳಿಗೆ ವೈಮಾನಿಕ ಸಂಚಾರ ಜಾಗೃತಿ ನೀಡುವ ಇನ್ವೋಲಿ-ಸ್ವಿಸ್ ಮತ್ತು ಸುರಕ್ಷಿತಾ ಪರಿಣಿತ ಹನಿವೆಲ್ ಏರೋಸ್ಪೇಸ್ ಸಂಸ್ಥೆಗಳಿವೆ. ಔಷಧ ಸಾಗಣೆ ಪ್ರಯೋಗಕ್ಕೆ ಮೆಡ್‌ಕಾಪ್ಟರ್ ಮತ್ತು ಟಿಎಎಸ್‌ನ ರಾಂಡಿಂಟ್ ಎಂಬ ಎರಡು ವಿಭಿನ್ನ ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ಮೆಡ್‌ಕಾಪ್ಟರ್ 15 ಕಿಮೀ ದೂರದವರೆಗೆ 1 ಕೆಜಿ ತೂಕವನ್ನು ಸಾಗಿಸಲಿದೆ. ಇನ್ನೂ ರಾಂಡಿಂಟ್ 12 ಕಿ ಮೀ ದೂರವರೆಗೆ 2 ಕೆಜಿ ಔಷಧ ಸಾಗಿಸಬಲ್ಲದು.
ಈ ಎರಡು ಡ್ರೋನ್‌ಗಳ ಮೂಲಕ 30-45 ದಿನಗಳವರೆಗೆ ಪರೀಕ್ಷೆ ಗೌರಿಬಿದನೂರು ವ್ಯಾಪ್ತಿಯಲ್ಲಿ ಪ್ರಯೋಗಿಕವಾಗಿ ನಡೆಸಲಾಗುತ್ತಿದೆ. ಇಂದಿನಿಂದ ಅಧಿಕೃತವಾಗಿ ಮೆಡ್ ಕಾಪ್ಟರ್‌ಗಳ ಮೂಲಕ ಪ್ರಯೋಗಕ್ಕೆ ಅಧಿಕಾರಿಗಳು ಚಾಲನೆ ನೀಡಿದ್ದು ಯಾವ ರೀತಿ ಯಶಸ್ಸು ಕಾಣಲಿದೆ ಎಂಬುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.