ಚಿಕ್ಕಬಳ್ಳಾಪುರ :ಸೂಕ್ತ ಬೆಲೆ ಸಿಗದ ಹಿನ್ನೆಲೆ ಮಾರಾಟಗಾರರು ರಾಶಿ ರಾಶಿ ಟೊಮೊಟೊ ಹಣ್ಣನ್ನು ಮಾರ್ಕೇಟ್ ಬಳಿಯ ಚರಂಡಿಗೆ ಬಿಸಾಡಿರುವ ಘಟನೆ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ.
ಚರಂಡಿ, ಮಾರುಕಟ್ಟೆ ಎಲ್ಲೆಲ್ಲೂ ರಾಶಿಗಟ್ಟಲೇ ಟೊಮೊಟೊ.. ಕೊರೊನಾ ಹಾವಳಿಯಿಂದಾಗಿ ಸಾವಿರಾರು ಹೆಕ್ಟೇರ್ಗಳಲ್ಲಿ ಬೆಳೆದಿದ್ದ ಟೊಮೊಟೊಗೆ ಬೆಲೆ ಸಿಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಲಾಕ್‌ಡೌನ್ ಸಡಿಲಿಕೆ ನಂತರ ಟೊಮೊಟೊ ಬೆಳೆಗೆ ಉತ್ತಮ ಬೆಳೆಯೂ ದೊರೆತು ರೈತರ ಮೊಗದಲ್ಲಿ ಸಂತಸ ಕಾಣುವಂತಾಗಿತ್ತು. ಆದರೆ, ಮತ್ತೆ ಟೊಮೊಟೊ ಬೆಳೆಗೆ ಕೊರೊನಾ ಕಾಟ ಎದುರಾಗಿದ್ದು, ಬೆಳೆದ ಬೆಳೆಗೆ ಸೂಕ್ತ ನಿರ್ವಹಣೆ ಇಲ್ಲದೆ ಮಾರುಕಟ್ಟೆಗೆ ತಂದ ಟೊಮೊಟೊ ಹಣ್ಣನ್ನು ರಸ್ತೆ, ಚರಂಡಿಗಳಲ್ಲೇ ಬಿಸಾಡಿ ಹೋಗುವಂತಾಗಿದೆ.
ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಚಿಂತಾಮಣಿ ನಗರದಲ್ಲಿನ ಎಪಿಎಂಸಿ ಮಾರುಕಟ್ಟೆ ಉಭಯ ಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರ ಜನತೆಗೂ ಬಹುದೊಡ್ಡ ಮಾರುಕಟ್ಟೆಯಾಗಿದೆ. ಸದ್ಯ ಒಂದು ಕೆಜಿ ಉತ್ತಮ ಟೊಮೊಟೊ ಹಣ್ಣಿಗೆ 15 ರಿಂದ 20 ರೂ. ಬೆಲೆಸಿಗುತ್ತಿದೆ. ಆದರೆ, ನಂತರದಲ್ಲಿ ಬರುವ ಟೊಮೊಟೊ ಹಣ್ಣಿಗೆ ಸೂಕ್ತ ಬೆಲೆಯೂ ಸಿಗದೆ ನಿರ್ವಹಣೆಯೂ ಇಲ್ಲದೆ ರೈತರಿಗೆ ದಿಕ್ಕು ತೋಚದಂತಾಗಿದೆ.
ಇತ್ತ ಬೆಳೆದ ರೈತರಿಗೆ ಸೂಕ್ತ ಬೆಲೆಯೂ ಇಲ್ಲದೆ. ಅತ್ತ ಮಾರಾಟಗಾರರಿಗೆ ಮಾರುಕಟ್ಟೆ, ಸೂಕ್ತ ನಿರ್ವಹಣೆಯೂ ಇಲ್ಲದೆ ಎಲ್ಲೆಂದರಲ್ಲಿ ಸುರಿಯಲಾಗಿರುವ ಟೊಮೊಟೊ ಹಣ್ಣಿನಿಂದ ಈಗ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಕಳೆದ ರಾತ್ರಿ ನಗರದಲ್ಲಿ ಅಧಿಕ ಮಳೆಯೂ ಸುರಿದಿದ್ದು, ರಾಶಿಗಟ್ಟಲೇ ಟೊಮೊಟೊ ಹಣ್ಣುಗಳು ಕೊಳೆತು ಚರಂಡಿಗಳ ಮೂಲಕ ನಗರವಾಸಿಗಳ ಮನೆ ಬಾಗಿಲು ತಲುಪಿದ್ದು, ದುರ್ವಾಸನೆಯಿಂದ ಎಪಿಎಂಸಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.