ಬಾಗೇಪಲ್ಲಿ: ಡಾ. ಅನಿಲ್‌ಕುಮಾರ್ ಆವುಲಪ್ಪ ತಮ್ಮ ಪೀಪಲ್ಸ್ ಆಸ್ಪತ್ರೆಯ ವತಿಯಿಂದ ತಾಲೂಕಿನಾದ್ಯಂತ ಮನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಬಡ ಕೂಲಿಕಾರರಿಗೆ, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಇಲ್ಲಿನ ಬಡ ಜನತೆಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುವ ಮೂಲಕ ಜನರನ್ನು ತಲುಪುತ್ತಿದ್ದಾರೆ. ಈ ಮಹತ್ತರ ಕಾರ್ಯಕ್ಕೆ ಇಂದು ಚೇಳೂರು ಗ್ರಾಮದ ಕೃಷಿ ಕೂಲಿಕಾರರಿಗೆ ಶಿಬಿರ ನಡೆಸುವ ಮೂಲಕ ಚಾಲನೆ ನೀಡಲಾಯಿತು. ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಯ ಜೊತೆಗೆ ಉಚಿತ ಔಷಧಿ ವಿತರಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಅಲ್ಲದೇ ತನ್ನ ಸ್ವಂತ ಹಣದಿಂದ ಬಡವರ ಪರ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ಸೋಂಕಿನಿಂದ ಬಡ ಕೂಲಿಕಾರರು ಪಾರಾಗಲು, ಹಳ್ಳಿಯಲ್ಲಿ ಓದಿರುವ ಕನಿಷ್ಟ 7 ಮಂದಿಯ ಗುಂಪು ರಚಿಸಿ ಅವರ ಮೂಲಕ ಆ ಹಳ್ಳಿಯಲ್ಲಿರುವ 60 ವರ್ಷಗಳ ಮೇಲ್ಪಟ್ಟ ಹಾಗೂ ರಿಸ್ಕ್ ಪಾಪುಲೇಷನ್ ಎಂದು ಗುರುತಿಸುತ್ತಿದ್ದಾರೆ. ನಂತರ ಅವರಿಗೆ ಪ್ರತಿ ದಿನ ಥರ್ಮಲ್ ಟೆಸ್ಟ್ ಮತ್ತು ಪಲ್ಸ್ ಆಕ್ಸೀಮೀಟರ್ ಮೂಲಕ ಸ್ಯಾಚುರೇಷನ್ ಮತ್ತು ಪಲ್ಸ್ ರೀಡಿಂಗ್ ದಾಖಲು ಮಾಡಿ ವೈದ್ಯರಿಗೆ ನೀಡಬೇಕು. ಅದನ್ನು ವೈದ್ಯರು ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಾರೆ. ಈ ಮೂಲಕ ಬಡವರು ಮಹಾಮಾರಿ ಸೋಂಕಿನಿಂದ ಪಾರಾಗಲು ಸಾಧ್ಯವಿದೆ ಎಂದು ಈ ಪ್ರಯತ್ನ ಕೈಗೊಂಡಿದ್ದಾರೆ.