ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿರುವ ನಂದಿಬೆಟ್ಟಕ್ಕೆ ರೋಪ್ ವೇ ಕಲ್ಪಿಸಬೇಕೆಂಬುದು ಬಹು ದಿನಗಳ ಕನಸು. ಈ ಕನಸಿಗೆ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಜೀವ ನೀಡಿದ್ದಾರೆ. ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕೆಂದು ಆದೇಶಿಸಿದ್ದಾರೆ. ಜೊತೆಗೆ ನಾಳೆ (ಜು.23) ನಂದಿಗಿರಿಧಾಮಕ್ಕೆ ಭೇಟಿ ನೀಡುವ ಸಚಿವ ಯೋಗೇಶ್ವರ್, ರೋಪ್ ವೇ ನಿರ್ಮಾಣದ ಸ್ಥಳ ವೀಕ್ಷಣೆ ಮಾಡಲಿದ್ದಾರೆ.
ರೋಪ್ ವೇ ನಿರ್ಮಾಣವಾಗುವ ಸ್ಥಳದಲ್ಲೇ ಪ್ರವಾಸಿಗರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ನಿರ್ಮಾಣ ಸಹ ಮಾಡಲಾಗುತ್ತಿದೆ. ಪಾರ್ಕಿಂಗ್ ನಿರ್ಮಾಣಕ್ಕೆ ಒಟ್ಟು 11 ಎಕರೆ ರೈತರ ಜಮೀನು ಸ್ವಾಧೀನ ಮಾಡಲಾಗಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಕಲಂ 71ರ ಅನ್ವಯ ಪಾರ್ಕಿಂಗ್ ಕಾಮಗಾರಿಗೆ ಸ್ಥಳವನ್ನ ಕಾಯ್ದಿರಿಸುವಂತೆ ಆದೇಶಿಸಲಾಗಿದೆ. ಆದರೆ ಈ ಜಾಗ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಗಡಿಭಾಗದಲ್ಲಿ ಬರಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಡುಕು ಹೊಸಹಳ್ಳಿಯ ಸರ್ವೆ ನಂಬರ್ 28 ರಲ್ಲಿ 8 ಎಕರೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿಯ ಸರ್ವೆ ನಂಬರ್ 94 ರಲ್ಲಿ 3 ಎಕರೆ 20 ಗುಂಟೆ ಜಾಗವನ್ನ ಕಾಯ್ದಿರಿಸಿದೆ, ಚಿಕ್ಕಬಳ್ಳಾಪುರದ ಮಡುಕು ಹೊಸಹಳ್ಳಿಯ ಸರ್ವೆ ನಂಬರ್ 28ರಲ್ಲಿಯೇ ಸರ್ಕಾರಿ ಗೋಮಾಳ ಜಾಗ ಇರುವಾಗ ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿಯ ರೈತರ ಜಮೀನು ಯಾಕೆಂದು ರೈತರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ.