ಚಿಕ್ಕಬಳ್ಳಾಪುರ:ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡದ ಕಾರಣ ರಾಜೀನಾಮೆ ಕೊಟ್ಟಿದ್ದೇವೆ ಹೊರತು ಬೇರೆ ಉದ್ದೇಶದಿಂದಲ್ಲ. ಕಾಂಗ್ರೆಸ್ಗೆ ತಮ್ಮನ್ನೇ ಅರ್ಪಿಸಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿದ್ದೆವು. ಆದರೆ, ಸಮ್ಮಿಶ್ರ ಸರ್ಕಾರ ರಚಿಸಿದ ಬಳಿಕ ನಮ್ಮಂತ ಪ್ರಾಮಾಣಿಕರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಅನರ್ಹ ಶಾಸಕ ಸುಧಾಕರ್ ದೋಸ್ತಿ ನಾಯಕರ ಆಡಳಿತ ಬಗ್ಗೆ ಕಿಡಿಕಾರಿದ್ದಾರೆ.
ಇಲ್ಲಿನ ಮೇಗಾಡೈರಿ, ಕಲುಷಿತ ನೀರಿನ ಘಟಕ, ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲಿಸಿ ಮಾತನಾಡಿದ ಅವರು. ಯಾವ ಅನುದಾನ ಇಲ್ಲದೆಯೇ ಪಕ್ಷದಿಂದ ಹೊರ ಬಂದಿದ್ದೇವೆ. ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಆಗಿತ್ತು, ಅದನ್ನು ಕನಕಪುರದತ್ತ ತೆಗೆದುಕೊಂಡು ಹೋದರು. ಅದು ದ್ವೇಷ ರಾಜಕಾರಣವಲ್ಲವೇ..? ಎಂದು ಪ್ರಶ್ನಿಸಿದರು.
ಈಗಾಗಲೇ ರಾಮನಗರ, ಮಂಡ್ಯದಲ್ಲಿ ಮೆಡಿಕಲ್ ಕಾಲೇಜುಗಳಿವೆ. ಈಗ ಕನಕಪುರಕ್ಕೆ ಯಾಕೆ ಬೇಕಿತ್ತು. ಮೂರು ವರ್ಷದಲ್ಲಾದ ಮೆಡಿಕಲ್ ಕಾಲೇಜ್ ಅನ್ನು ವಾಪಸ್ ಪಡೆದಿದ್ದಾರೆ. ಒಂದೇ ಬಾರಿಗೆ ಕನಕಪುರಕ್ಕೆ ₹450 ಕೋಟಿ ರೂ. ನೀಡುವ ಬದಲು ಅಲ್ಲಿ ₹250, ಇಲ್ಲಿ ₹250 ಕೋಟಿ ರೂ. ನೀಡಿ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಬಹುದಿತ್ತು. ಕೆಲವರಿಗೆ ಮಾತ್ರ ವಿಶೇಷ ಅನುದಾನ ಕೊಟ್ಟು ದ್ವೇಷ ರಾಜಕಾರಣ ಮಾಡಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ಬಗ್ಗೆ ಕಿಡಿಕಾರಿದರು.
ಸುಪ್ರೀಂಕೋರ್ಟ್ ತೀರ್ಪಿನ ನಂತರ ಏನಾಗಲಿದೆ ಎಂದು ತಿಳಿಯಲಿದೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ. ಸದ್ಯ ಮೂಲಭೂತ ಹಕ್ಕುಗಳನ್ನು ಕಸಿಯುವದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಅದನ್ನು ಮಾಜಿ ಸ್ಪೀಕರ್ ಆರ್.ರಮೇಶ್ಕುಮಾರ್ ಕದಿಯಲು ಯತ್ನಿಸಿದ್ದಾರೆ. ತೀರ್ಪಿನ ಬಳಿಕ ಅವರಿಗೂ ಗೊತ್ತಾಗಲಿದೆ ಎಂದರು.
ಇನ್ನೂ ಮಾಲಿನ್ಯ ನಿಯಂತ್ರಣ ಬಗ್ಗೆ ಹೇಳಿಕೆ ನೀಡಿದ ಸುಧಾಕರ್, ಹೊಸ ಆಡಳಿತ ಪಕ್ಷ ತೆಗೆದುಕೊಳ್ಳುವ ನಿರ್ಧಾರದಲ್ಲಿ ನಾನು ಅಧ್ಯಕ್ಷ ಸ್ಥಾನ ಮುಂದುವರೆಯಬೇಕೋ ಬೇಡವೋ ಎನ್ನುವುದು ತಿಳಿಯಲಿದೆ ಎಂದರು.