ಚಿಕ್ಕಬಳ್ಳಾಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ಭರವಸೆಗಳ ರಾಶಿ ಪ್ರಕಟಿಸುವ ಜನಪ್ರತಿನಿಧಿಗಳು ಚುನಾವಣೆ ಮಗಿದ ಬಳಿಕ ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ಇತ್ತ ಅಧಿಕಾರಕ್ಕೆ ಬರುವ ಸರ್ಕಾರ ಕೂಡ ತನ್ನ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಹೆಚ್ಚು ಒಲವು ತೋರುತ್ತದೆ. ಪ್ರತಿಪಕ್ಷಗಳ ಎಂಎಲ್ಎ ಮತ್ತು ಎಂಎಲ್ಸಿಗಳಿಗೆ ಅನುದಾನ ಬಿಡುಗಡೆ ವಿಷಯದಲ್ಲಿ ತಾರತಮ್ಯ ಮಾಡುತ್ತದೆ.
ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ವರ್ಷಕ್ಕೆ 2 ಕೋಟಿ (ಒಂದು ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗುವ ಅನುದಾನ) ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಜನಪ್ರತಿನಿಧಿಗಳಿಗೆ ಕಾಲ ಕಾಲಕ್ಕೆ ಅನುದಾನ ಕೈ ಸೇರದ ಕಾರಣ ಹಿಂದೆಂದೂ ಕಾಣದ ರೀತಿ ಕ್ಷೇತ್ರಗಳ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಒಂದು ಕಡೆ ಕೊರೊನಾ ಸೋಂಕು ಮತ್ತೊಂದೆಡೆ ಪ್ರವಾಹದಿಂದ ರಾಜ್ಯದ ಜನತೆಯ ಸ್ಥಿತಿ ಗಂಭೀರವಾಗಿದ್ದು, ಮೀಸಲಿಡಬೇಕಿದ್ದ ಅಭಿವೃದ್ಧಿ ನಿಧಿ ಶಾಸಕರಿಗೆ ಸಿಗದಂತಾಗಿದೆ.
ಈ ಕುರಿತು ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಹಾಗೂ ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರು ನಿಧಿ ಬಿಡುಗಡೆ ಮಾಡದ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅನುದಾನ ಬಿಡುಗಡೆ ಮಾಡದ ಕುರಿತು ಕೇಳಿ ಬರುತ್ತಿರುವ ಆರೋಪಗಳಿಗೆ ಸಾಕ್ಷಿಯಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ 69 ಲಕ್ಷ ಶಾಸಕರ ನಿಧಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಪುಡಿಗಾಸು ಕೂಡ ಬಿಡುಗಡೆಗೊಂಡಿಲ್ಲ ಎಂದು ಎಂ.ಕೃಷ್ಣಾರೆಡ್ಡಿ ಈ ಹಿಂದೆ ಆರೋಪಿಸಿದ್ದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಕೊರೊನಾ ಹಿನ್ನೆಲೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಮ್ಮ ರಾಜ್ಯ ಸರ್ಕಾರ ಕೂಡ ಇದಕ್ಕೆ ಹೊರತಾಗಿಲ್ಲ. ಅದೇ ರೀತಿ ಶಾಸಕರ ನಿಧಿಗೆ ಹಣ ಬಿಡುಗಡೆಗೊಂಡಿಲ್ಲ. ಕಳೆದ ಸರ್ಕಾರದಲ್ಲೂ ಎಲ್ಲಾ ಶಾಸಕರಿಗೆ ಅನುದಾನ ಬಿಡುಗಡೆಯಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.