ಚಿಕ್ಕಬಳ್ಳಾಪುರ:ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರದ ವತಿಯಿಂದ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿತ್ತು. ಈ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಚಂದನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರಕೆಯಾಗಿದೆ ಎಂದು ತಿಳಿದು ಬಂದಿದೆ. ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗಿದ್ದ ಅಕ್ಕಿಯನ್ನು ಶುಚಿ ಮಾಡುವಾಗ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿತ್ತು.
ಚಂದನೂರು ಸರ್ಕಾರಿ ಶಾಲೆಗೆ ದೌಡಾಯಿಸಿದ ಅಧಿಕಾರಿಗಳು ಇದನ್ನೂ ಓದಿ:ಸರ್ಕಾರಿ ಶಾಲಾ ಮಕ್ಕಳಿಗೆ ನೀಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ
ಇಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸ ಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಶ್ರೀನಿವಾಸ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ವಿತರಣೆ ಮಾಡಲಾಗಿದ್ದ ಅಕ್ಕಿಯನ್ನು ಮಕ್ಕಳ ಪೋಷಕರಿಂದ ಶಾಲೆಗೆ ತರಿಸಿಕೊಂಡು ಆಹಾರ ಸುರಕ್ಷಾ ಅಧಿಕಾರಿ, ಮಕ್ಕಳ ಪೋಷಕರು ಹಾಗು ಗ್ರಾಮಸ್ಥರ ಮುಂದೆ ಪರೀಕ್ಷೆ ಮಾಡಿದ್ದಾರೆ.
ಅಲ್ಲದೇ ಅಕ್ಕಿಯನ್ನು ಮಾದರಿಗಾಗಿ ಸಂಗ್ರಹಿಸಿ ಆಹಾರ ಸುರಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಅದೇ ರೀತಿ ಶಾಲೆಯಲ್ಲಿ ವಿತರಣೆ ಆಗದೆ ಇರುವ ಅಕ್ಕಿಯನ್ನು ಅಮಾನತುಪಡಿಸಿ ಹಿಂತಿರುಗಿಸಿದ್ದಾರೆ.