ಬಾಗೇಪಲ್ಲಿ:ಶಾಸಕ ಎಸ್.ಎನ್. ಸುಬ್ಬಾರೆಡ್ಡಿರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಯುವಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಕಾಂಗ್ರೆಸ್ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಜಮಾಯಿಸಿದ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸುಬ್ಬಾರೆಡ್ಡಿರವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವ ಯುವಕನ ವಿರುದ್ಧ ಧಿಕ್ಕಾರ ಕೂಗಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನರಸಿಂಹಪ್ಪ ಮಾತನಾಡಿ, ‘ಸುಬ್ಬಾರೆಡ್ಡಿ ಅವರು ಶಾಸಕರಾದ 7 ವರ್ಷಗಳಿಂದ ಕೋಮುಗಲಭೆಗಳು, ಅಶಾಂತಿ ಹಾಗೂ ಗಲಾಟೆಗಳು ನಡೆದಿಲ್ಲ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ, ಸಮಾನ ಅವಕಾಶ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಹ ರಾಜಕೀಯ ಮಾಡದೇ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಚುನಾಯಿತರಾಗಿದ್ದಾರೆ. ಕ್ಷೇತ್ರದ ಬಗ್ಗೆ ಗಾಳಿ ಗಂಧ ತಿಳಿಯದ ಕೆಲವರು ತಮ್ಮ ಬೆಂಬಲಿಗರ ಮೂಲಕ ಸುಬ್ಬಾರೆಡ್ಡಿರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಯುವಕನ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ನರೇಂದ್ರ ಮಾತನಾಡಿ, ‘ರಾಜಕೀಯ ಚುನಾವಣೆಗಳಲ್ಲಿ ಇರಬೇಕು. ಸುಬ್ಬಾರೆಡ್ಡಿಯವರು ಕ್ಷೇತ್ರದಲ್ಲಿ ಶಾಂತಿಯ ವಾತಾವರಣ ಇರಬೇಕು ಎಂದು ಬಯಸುವವರಾಗಿದ್ದಾರೆ. ಆದರೆ ಕ್ಷೇತ್ರದ ಬಗ್ಗೆ ತಿಳಿಯದ ರಾಜಕೀಯ ವಿರೋಧಿಗಳ ಬೆಂಬಲಿಗ ಉಪ್ಪುಕುಂಟಪಲ್ಲಿ ಮಧುಸೂದನರೆಡ್ಡಿ ಮದ್ಯ ಸೇವಿಸಿ, ಸುಬ್ಬಾರೆಡ್ಡಿಯವರನ್ನು ಏಕವಚನದಲ್ಲಿ ನಿಂದಿಸಿ, ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದ್ದಾರೆ. ಕೂಡಲೇ ಆ ಯುವಕನನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಸರ್ಕಲ್ ಇನ್‌ಸ್ಪೆಕ್ಟರ್ ನಯಾಜ್ ಬೇಗ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಲ ಕಾಲ ಬಸ್ ನಿಲ್ದಾಣದ ಕೆಲ ಅಂಗಡಿಗಳು ಮುಚ್ಚಿದ್ದವು. ಮುಖ್ಯರಸ್ತೆಯಲ್ಲಿ ಮುಖಂಡರು ಪ್ರತಿಭಟಿಸಿದ್ದರಿಂದ, ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.
ಅಮರನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ. ಮಂಜುನಾಥ್, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಮಂಜುನಾಥರೆಡ್ಡಿ, ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಎ. ಶ್ರೀನಿವಾಸ್, ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸೋಮಶೇಖರ್ ಮುಂತಾದವರು ಹಾಜರಿದ್ದರು.