ಕರ್ನಾಟಕ

karnataka

ETV Bharat / state

ಎಷ್ಟೇ ಅಲೆದರೂ ರೈತರಿಗೆ ಸಿಗುತ್ತಿಲ್ಲವಂತೆ ಸರ್ಕಾರದ ಯೋಜನೆಗಳ ಲಾಭ - Bagepalli Department of Agriculture irresponsible News

ಈ ಪ್ರದೇಶಕ್ಕೆ ಯಾವುದೇ ರೀತಿಯ ಕೈಗಾರಿಕೆಗಳಿಲ್ಲ, ಜೀವಂತ ಜಲ ಮೂಲವಿಲ್ಲ. ಹಾಗಾಗಿ ಕುಡಿಯುವ ನೀರಿಗಾಗಿಯೇ ಸೆಣಸಾಡುವಂತಹ ಗ್ರಾಮೀಣ ಪ್ರದೇಶಗಳ ತಾಲೂಕು ಇದಾಗಿದೆ. ಇಂತಹ ತಾಲೂಕಿನ ಬಹುಪಾಲು ಜನರು ರೈತರಾಗಿದ್ದಾರೆ.

ರೈತನ ರೆಟ್ಟೆ ಮುರಿಯುತ್ತಿರುವ ಕೃಷಿ ಇಲಾಖೆ
ರೈತನ ರೆಟ್ಟೆ ಮುರಿಯುತ್ತಿರುವ ಕೃಷಿ ಇಲಾಖೆ

By

Published : Aug 20, 2020, 7:46 AM IST

ಬಾಗೇಪಲ್ಲಿ:ತಾಲೂಕಿನ ಹೆಸರು ಹೇಳಿದರೆ ಸಾಕು ಹಿಂದುಳಿದ, ನಿರಂತರ ಬರದ ಪಟ್ಟಿಯಲ್ಲಿ ಕಾಯಂ ಹೆಸರಿರುವ ತಾಲೂಕಾಗಿ ಪ್ರಸಿದ್ಧಿಯಾಗಿದೆ. ಈ ಪ್ರದೇಶ ಹಿಂದುಳಿಯಲು ಪ್ರಾಕೃತಿಕ ಪಾಲು ಅರ್ಧವಿದ್ದರೆ, ಇನ್ನರ್ಧ ಪಾಲು ಇಲ್ಲಿನ ಅಧಿಕಾರಿ ವರ್ಗ, ಜನಪ್ರತಿನಿಧಿಗಳದ್ದಾಗಿದೆ.

ಈ ಪ್ರದೇಶಕ್ಕೆ ಯಾವುದೇ ರೀತಿಯ ಕೈಗಾರಿಕೆಗಳಿಲ್ಲ, ಜೀವಂತ ಜಲ ಮೂಲವಿಲ್ಲ. ಹಾಗಾಗಿ ಕುಡಿಯುವ ನೀರಿಗಾಗಿಯೇ ಸೆಣಸಾಡುವಂತಹ ಗ್ರಾಮೀಣ ಪ್ರದೇಶಗಳ ತಾಲೂಕು ಇದಾಗಿದೆ. ಇಂತಹ ತಾಲೂಕಿನ ಬಹುಪಾಲು ಜನರು ರೈತರಾಗಿದ್ದಾರೆ. ಅದೂ ಮಳೆಯಾಶ್ರಿತ ಬೇಸಾಯ ಪದ್ಧತಿಗೆ ಒಗ್ಗಿಕೊಂಡು ಬದುಕು ನೆಚ್ಚಿಕೊಂಡವರು. ಅಂದಾಜಿನ ಪ್ರಕಾರ ಸರ್ಕಾರ ಪ್ರತೀ ವರ್ಷ ಬರ ಅಧ್ಯಯನ ತಂಡವನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಕಳುಹಿಸುತ್ತಾದರೂ ಒಮ್ಮೊಮ್ಮೆ ಬಾಗೇಪಲ್ಲಿಯ ಗ್ರಾಮಗಳಿಗೆ ಅಧ್ಯಯನ ತಂಡ ತಲುಪುವದಕ್ಕೂ ಭಾರವಾಗಿ ಬಿಡುತ್ತದೆ.

ಇಷ್ಟೆಲ್ಲಾ ಸವಾಲುಗಳ ನಡುವೆ ರೈತನಿಗೆ ಸರ್ಕಾರಗಳಿಂದ ಸಿಗಬೇಕಾದ ಸೌಲಭ್ಯಗಳಿಗಾಗಿ ಚಾತಕ ಪಕ್ಷಿಗಳಂತೆ ಕಾದು ಅರ್ಜಿ ಸಲ್ಲಿಸಿದರೆ ಇಲ್ಲಿನ ರೈತ ಸಂಪರ್ಕ ಕೇಂದ್ರಗಳು, ಕೃಷಿ ಇಲಾಖೆ ಕಚೇರಿಯ ಅಧಿಕಾರಿ ವರ್ಗ ಮಾತ್ರ ರೈತರ ಕೈಗೆ ಸಿಗುವುದೇ ಇಲ್ಲ. ಹಾಗೋ ಹೀಗೋ ಕಚೇರಿ ತಲುಪಿದ ರೈತರಿಗೆ ಅಧಿಕಾರಿಗಳು ಲಭ್ಯವಾಗುವುದು ಅಷ್ಟು ಸುಲಭವಾದ ಮಾತಲ್ಲ. ಅಪ್ಪಿತಪ್ಪಿ ರೈತರಿಗೆ ಸಿಬ್ಬಂದಿ ಸಿಕ್ಕಿ ಸಾರ್ ನಮಗೆ ಬಿತ್ತನೆ ಬೀಜ ಬೇಕಿತ್ತು, ನಮಗೆ ಗೊಬ್ಬರ ಬೇಕಿತ್ತು ಅಂತ ಕೇಳಿದರೆ ಅದಕ್ಕೆ ಸಿಟ್ಟಾಗುವುದರ ಜೊತೆಗೆ ನಿರ್ಲಕ್ಷ್ಯ ಪ್ರತಿಕ್ರಿಯೆಗಳು ಬರುತ್ತವೆ ಎಂದು ರೈತರು ತಮ್ಮ ಗೋಳು ಹೇಳಿಕೊಂಡಿದ್ದಾರೆ.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹೊರ ಗುತ್ತಿಗೆ ಆಧಾರದ ಮೇಲೆ ಲೆಕ್ಕ ಸಹಾಯಕ ಹುದ್ದೆಗೆ ಸರ್ಕಾರದ ಕಾನೂನು, ಷರತ್ತುಗಳನ್ನು ಬದಿಗಿಟ್ಟು ಆಕಾಂಕ್ಷಿಯು ಅನರ್ಹತೆಗಳಿದ್ದರೂ ಭ್ರಷ್ಟಾಚಾರಕ್ಕೆ ಸಹಕರಿಸುವಂತಹ ವ್ಯಕ್ತಿಯನ್ನು ನೇಮಿಸಿಕೊಂಡು ತಮಗೆ ಬೇಕಾದ ಏಜಂಟರನ್ನಾಗಿಸಿಕೊಂಡಿರುತ್ತಾರೆ ಎಂದು ಜಿಲ್ಲಾ ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರಾಮ ಆರೋಪಿಸಿದರು. ಈ ಕೂಡಲೇ ಇಂತಹ ಭ್ರಷ್ಟ ಅಧಿಕಾರಿಯ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸುಮಾರು 40-50 ಕಿ.ಮೀ. ದೂರದಿಂದ ಇಲ್ಲಿಗೆ ಬರಬೇಕು. ರೈತರು ದೇಶದ ಬೆನ್ನೆಲುಬು ಅಂತಾರೆ. ಆ ಬೆನ್ನೆಲುಬು ಮುರಿಯುತ್ತಿರುವ ಭ್ರಷ್ಟ ಅಧಿಕಾರಿಗಳಿಗೆ, ನಿರ್ಲಕ್ಷ್ಯ ತೋರುವ ಸಿಬ್ಬಂದಿಯನ್ನು ಶಿಕ್ಷಿಸಲು ಮಾತ್ರ ಇಲ್ಲಿನ ರಾಜಕೀಯ ಹಿತಾಸಕ್ತಿ ವಿಫಲವಾಗಿದೆ ಮತ್ತು ಅಂತವರನ್ನು ಪೋಷಿಸುತ್ತಿದೆ. ತಾಲೂಕಿನ ಕೃಷಿ ಇಲಾಖೆ ಕೆಲ ಸಿಬ್ಬಂದಿ ಸಾಮಾನ್ಯ ರೈತರೆಂದರೆ ಆಗದಂತೆ ವರ್ತಿಸುತ್ತಾರೆ. ಇಂತವರು ರೈತರಿಗೆ ನೆರವಾಗುತ್ತಾರೆಯೇ? ಎಂದು ರೈತ ಚೇಳೂರು ಹೋಬಳಿಯ ಸದಾಶಿವ ಆಕ್ರೋಶ ವ್ಯಕ್ತಪಡಿಸಿದರು.

ಸಹಾಯಕ ನಿರ್ದೇಶಕರ ಕಚೇರಿಗೆ ಎರಡು ತಿಂಗಳುಗಳಿಂದ ಅಲೆದಾಡುತ್ತಿದ್ದೇನೆ. ಕೃಷಿ ಹೊಂಡ, ಟಾರ್ಪಲ್ ವಿತರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡದೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಲವೆಡೆ ಕೃಷಿ ಹೊಂಡ ಕೆಲಸಗಳು ನಡೆಯುತ್ತಿವೆ. ಆದರೆ ಕೊತ್ತಕೋಟೆ ಗ್ರಾಮ ಪಂಚಾಯತ್​​ ವ್ಯಾಪ್ತಿಯಲ್ಲಿ ಅರ್ಜಿ ಸ್ವೀಕರಿಸಬೇಕು, ಅಂದಾಜು ವೆಚ್ಚದ ಪಟ್ಟಿ ನೀಡಬೇಕು. ರೈತರಿಗೆ ಸ್ಪಂದಿಸದ ಅಧಿಕಾರಿಗಳು ಕೃಷಿ ಇಲಾಖೆಗೆ ಏಕೆ ಬರಬೇಕು? ಅಂತವರನ್ನು ತಕ್ಷಣವೇ ಇಲ್ಲಿಂದ ವರ್ಗಾಯಿಸಿ ಎಂದು ಪ್ರಜಾ ಸಂಘರ್ಷ ಸಮಿತಿಯ ಮುಖಂಡ ಕೊಲಿಂಪಲ್ಲಿ ಚಲಪತಿ ಒತ್ತಾಯಿಸಿದರು.

ABOUT THE AUTHOR

...view details