ಚಿಕ್ಕಬಳ್ಳಾಪುರ: ನಿರಂತರವಾಗಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆಗೆ ಸ್ಪರ್ಧೆಯೆಂಬಂತೆ ಕಳೆಯೂ ಬೆಳೆಯುತ್ತಿದ್ದು, ಅದರ ನಿವಾರಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಕೃಷಿ ಕೂಲಿ ಕಾರ್ಮಿಕರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.
ಕೊರೊನಾ ಆತಂಕದಿಂದ ನಗರಗಳಿಂದ ವಾಪಸ್ ಆದ ಬಹುತೇಕ ಕುಟುಂಬಗಳು ತಮಗಿದ್ದ ಅಲ್ಪಸ್ವಲ್ಪ ಜಮೀನುಗಳನ್ನು ಬಿಡದಂತೆ ಬೆಳೆ ಹಾಕಲು ಮುಂದಾಗಿದ್ದಾರೆ. ತಾಲೂಕಿನಲ್ಲಿ ಬಹುತೇಕ ಬಿತ್ತನೆ ಕಾರ್ಯ ಮುಗಿದಿದೆ. ಇನ್ನೇನಿದ್ದರೂ ಬೆಳೆ ನಿರ್ವಹಣೆಯ ಕಾರ್ಯವೇ ಸವಾಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ವೇಗವಾಗಿ ಬೆಳೆಯುತ್ತಿದೆ. ಅದರ ಜೊತೆಗೆ ಬೆಳೆ ನಾಶ ಮಾಡುವ ಮಟ್ಟಿಗೆ ಕಳೆ ಬೆಳೆಯುತ್ತಿರುವುದು ರೈತರನ್ನು ಚಿಂತೆಗೆ ಈಡು ಮಾಡಿದೆ.
ನಿತ್ಯವೂ ಬೆಳಗಾದ ಕೂಡಲೇ ಗ್ರಾಮಗಳಲ್ಲಿ ಕೂಲಿಕಾರ್ಮಿಕರನ್ನು ಕರೆದೊಯ್ಯಲು ಆಟೋಗಳು ನಿಲ್ಲುವಂತಾಗಿದೆ. ಆದರೂ ಕೃಷಿ ಕೂಲಿಕಾರ್ಮಿಕರು ಸಿಗುವುದು ಕಷ್ಟವಾಗಿದೆ.