ಚಿಕ್ಕಬಳ್ಳಾಪುರ :ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಂದಿ ಪ್ರವಾಸಕ್ಕೆ ಕಡಿವಾಣ ಹಾಕಲಾಗಿತ್ತು. ಇದೀಗ ಸೆ. 7 ರಿಂದ ನಂದಿ ಬೆಟ್ಟದ ಪ್ರವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಸಿಲಿಕಾನ್ ಸಿಟಿಗೆ ಕೂಗಳತೆಯ ದೂರದಲ್ಲಿರುವ ನಂದಿ ಬೆಟ್ಟ ಪ್ರವಾಸಿಗರಿಗೆ ಹಾಗೂ ಪ್ರೇಮಿಗಳಿಗೆ ಸ್ವರ್ಗದ ತಾಣವಾಗಿತ್ತು. ಕೊರೊನಾ ಭೀತಿಯಿಂದ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆಯ ನಂತರ ಜಿಲ್ಲಾಡಳಿತ ಕೆಲವು ನಿರ್ಬಂಧ ವಿಧಿಸಿ ನಂದಿ ಬೆಟ್ಟದ ಪ್ರವೇಶಕ್ಕೆ ಸೆಪ್ಟೆಂಬರ್ .7 ರಿಂದ ಅವಕಾಶ ಮಾಡಿಕೊಟ್ಟಿದೆ.
ಮುಂಜಾಗ್ರತಾ ಕ್ರಮ:
ಸದ್ಯ ನಂದಿ ಬೆಟ್ಟದ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಪಾಡಲು ಸೂಚಿಸಿದ್ದು, ಮಾಸ್ಕ್ ಧರಿಸದವರಿಗೆ ದಂಡವನ್ನು ವಿಧಿಸಲು ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ.
ಪ್ಲಾಸ್ಟಿಕ್ ನಿಷೇಧ :
ಅದೇ ರೀತಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದ್ದು, ಬಾಟಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಇನ್ನೂ ಪ್ರಕೃತಿ ಸೌಂದರ್ಯವನ್ನು ಸವಿಯಲು ಮುಂಜಾನೆ ಹಾಗೂ ರಾತ್ರಿ ಹಿಡಿ ಕಾಯುವ ಅವಶ್ಯಕತೆ ಇಲ್ಲ. ಬೆಳಗ್ಗೆ 8 ರ ನಂತರ ನಂದಿ ಬೆಟ್ಟದ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಸೂಚಿಸಿದ್ದಾರೆ.